ವಿಜಯಪುರ/ರಾಯಚೂರು: ಎಲ್ಲೆಲ್ಲೂ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ವಿಜಯಪುರ ಮತ್ತು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಜನರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ರಾಯಚೂರಿನಲ್ಲಿ ಮಾರ್ವಾಡಿ ಸಮಾಜದವರು ತಮ್ಮ ಮನೆಯಲ್ಲಿ ಜನಿಸಿದ ಮೊದಲ ಗಂಡು ಮಗುವಿಗೆ ಬಣ್ಣ ಹಚ್ಚಿ ಸಂಪ್ರದಾಯ ಬದ್ಧವಾಗಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಹೋಳಿ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನರಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಬಾರಿ ಬಣ್ಣದ ಜೊತೆ ಮೊಟ್ಟೆ ಹೊಡೆಯುವುದನ್ನ ನಿರ್ಬಂಧಿಸಲಾಗಿದೆ.
ವಿಜಯಪುರದಲ್ಲಿ ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಹಾಗೂ ವಯೊವೃದ್ದರವರೆಗೆ ಬಣ್ಣಗಳಲ್ಲಿ ಮಿಂದೆಳುತ್ತಿದ್ದಾರೆ. ಪರೀಕ್ಷಾ ಭಯದ ನಡುವೆಯೂ ಪಿಯುಸಿ ವಿದ್ಯಾರ್ಥಿಗಳು ಓಕುಳಿ ಆಟದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಸಂಪ್ರದಾಯಿಕ ಹೋಳಿ ಹಬ್ಬಕ್ಕೆ ಬಿಜೆಪಿ ಪಕ್ಷದ ಕಾರ್ಯಕತ್ರರು ಶಿವಾಜಿ ವೃತ್ತದಲ್ಲಿ ಬೃಹತ್ ರಾವಣನ ಪ್ರತಿಕೃತಿ ದಹಿಸುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ಕಾಮಣ್ಣನ ಮಕ್ಕಳು ಕಳ್ಳನ ಮಕ್ಕಳು ಎಂದು ಕೇಕೆ, ಸಿಳ್ಳೆ ಹಾಕುತ್ತಾ ಯುವಕರು ಸಂಭ್ರಮಿಸಿದರು. ಬೈಕಲ್ಲಿ ಗುಂಪು ಗುಂಪಾಗಿ ಜಾಲಿ ರೈಡ್ ಮಾಡುತ್ತಾ ಕೈಯಲ್ಲಿ ಹಲಗೆ ಬಾರಿಸುತ್ತಾ ಕೇಕೆ ಹಾಕಿದರು.
ಸ್ಥಳೀಯ ಸಂಸ್ಥೆಯೊಂದು ರಂಗ್ ಹೋಲಿ ಕಾ ಸಾಥ್ ಎಂಬ ನಾಮಫಲಕದೊಂದಿಗೆ ಮಹಿಳೆಯರಿಗೆ, ಯುವಕರಿಗೆ ಬಣ್ಣದ ಹಬ್ಬ ಆಡಲು ಆಶ್ರಮ ರಸ್ತೆಯ ಸರ್ಕಸ್ ಗ್ರೌಂಡ್ ನಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ನೂರಾರು ಯುವಕ ಯುವತಿಯರು ಡಿಜೆ ಹಾಡಿನೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.