ವಿಜಯಪುರ: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬರುವ ರಸ್ತೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ವಿಜಯಪುರ ತಾಲೂಕಿನ ತಿಕೋಟ ಬಳಿ ನಡೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಸುಮಾರಿಗೆ ತಿಕೋಟದಿಂದ ತೋರವಿಗೆ ರಸ್ತೆಯ ಮೂಲಕ ಪ್ರಯಾಣ ಬೆಳೆಸಲಿದ್ದರು. ಈ ಮಾರ್ಗದ ಅಥಣಿ-ವಿಜಯಪುರ ರಸ್ತೆಯ ಒಂದು ಭಾಗದ ಸರ್ಕಾರಿ ಜಾಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಇದರಿಂದ ಬೆಂಕಿಯ ಕೆನ್ನಾಲಿಗೆ ರಸ್ತೆಗೆ ಹಬ್ಬಿದ್ದು, ಹೊಗೆಯಿಂದ ರಸ್ತೆಯು ತುಂಬಿಕೊಂಡಿತ್ತು.
ರಾಹುಲ್ ಗಾಂಧಿ ಅವರ ವಿರೋಧಿಗಳು ಈ ಕೃತ್ಯವನ್ನ ಎಸಗಿರುವ ಶಂಕೆಯಿದ್ದು, ಘಟನೆ ನಡೆದ ಸ್ಥಳದಲ್ಲಿ ಹೊಗೆಯಿಂದ ದಾರಿ ಕಾಣದೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.
ಈ ವೇಳೆ ಅಥಣಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ವೋಟ್‍ಗಾಗಿ ಬಸವಣ್ಣನವರ ಹೆಸರನ್ನು ಬಳಸುತ್ತಾರೆ. ಆದರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ವಚನವನ್ನು ಪಾಲಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ತಮ್ಮ ಭಾಷಣದಲ್ಲಿ ಬಸವಣ್ಣ ನವರ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ… ಎಂಬ ವಚನವನ್ನು ಹೇಳಿದ ಅವರು, ಇದನ್ನು ಪ್ರಧಾನಿ ಮೋದಿ ಪಾಲಿಸ್ತಿಲ್ಲ. ಮೋದಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಥಣಿಯಿಂದ ನೇರ ಬಬಲೇಶ್ವರದ ತಿಕೋಟಾಗೆ ಬಂದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಬೃಹತ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡರು. ರಾಹುಲ್ ಗಾಂಧಿಗೆ ಏಲಕ್ಕಿ ಮಾಲೆ ಹಾಕಿ ವಿಭೂತಿ ಬಳಿದು, ಬಸವಣ್ಣನ ಪ್ರತಿಮೆ ಕೊಟ್ಟು ಸಚಿವ ಎಂಬಿ ಪಾಟೀಲ್ ಸನ್ಮಾನಿಸಿದರು. ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, ಇಲ್ಲೂ ಬಸವಣ್ಣ, ಅಕ್ಕಮಹಾದೇವಿ, ರಾಣಿ ಚೆನ್ನಮ್ಮರನ್ನು ಸ್ಮರಿಸಿದರು. ಅಲ್ಲದೇ ಸಿದ್ದರಾಮಯ್ಯ ಸರ್ಕಾರ, ಮಹಿಳೆಯರಿಗಾಗಿ ರೂಪಿಸಿದ ಯೋಜನೆಗಳನ್ನು ಹೊಗಳಿದರು.