ಪಾಟ್ನಾ: ಬಿಹಾರದಲ್ಲಿ ಪರೀಕ್ಷಾ ಅವ್ಯವಹಾರಗಳ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ವಿದ್ಯಾರ್ಥಿಗಳ ಕುಟುಂಬಸ್ಥರು ಕಟ್ಟಡ ಏರಿ ಎಲ್ಲರ ಸಮ್ಮುಖದಲ್ಲೇ ಪುಸ್ತಕಗಳನ್ನ ನೀಡಿ ಕಾಪಿ ಮಾಡಲು ಸಹಾಯ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದೇ ಬಿಹಾರದಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ.
ಬಬಿತಾ ಕುಮಾರಿ ಹೆರಿಗೆಯಾದ 4 ಗಂಟೆ ಬಳಿಕ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಪರೀಕ್ಷಾ ಕೊಠಡಿಯಲ್ಲಿ ಕುಳಿತಿದ್ದರು. ಈ ದೃಶ್ಯವನ್ನ ನೋಡಿ, ಶಿಕ್ಷಕರು ಹಾಗೂ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ರು. ಬಬಿತಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರದಿದ್ದರಿಂದ ಪರೀಕ್ಷೆ ಬರೆಯಲು ಆಕೆಗೆ ಕಷ್ಟವಾಗಿತ್ತು. ಇದನ್ನ ನೋಡಿದ ಮೇಲ್ವಿಚಾರಕರು, ಅಜ್ಜಿಗೆ ಮಗುವನ್ನ ಹಿಡಿದು ಕ್ಲಾಸ್‍ನೊಳಗೆ ಕೂರಲು ಅವಕಾಶ ಮಾಡಿಕೊಟ್ಟರು. ನಂತರ ಬಬಿತಾ ತನ್ನ ಪರೀಕ್ಷೆಯತ್ತ ಗಮನ ಹರಿಸಿದರಾದ್ರೂ, ಆಗಾಗ ಮಗುವಿನ ಬಳಿ ಬಂದು ಮತ್ತೆ ಹೋಗಿ ಪರೀಕ್ಷೆ ಬರೆಯುತ್ತಿದ್ದರು.
ಬಬಿತಾಗೆ ಒಂದು ವರ್ಷದ ಹಿಂದೆ ಕಾರ್ಮಿಕರೊಬ್ಬರ ಜೊತೆ ಮದುವೆಯಾಗಿತ್ತು. ಬಬಿತಾ ಪತಿ ಪರೀಕ್ಷಾ ಕೇಂದ್ರದ ಹೊರಗೆ ನಿಂತು, ಬೆಳಗ್ಗೆಯಷ್ಟೇ ತನ್ನ ಮಗುವಿಗೆ ಜನ್ಮ ನೀಡಿ ಪರೀಕ್ಷೆ ಬರೆಯುತ್ತಿರುವ ಹೆಂಡತಿ ಬಗ್ಗೆ ಚಿಂತೆಯಲ್ಲಿದ್ದರು.
ಬಬಿತಾ ಅವರ ದೃಢ ಸಂಕಲ್ಪ ನೋಡಿ ಇತರೆ ವಿದ್ಯಾರ್ಥಿಗಳು ಕೂಡ ಅಚ್ಚರಿಪಟ್ಟರು. ಇದರಿಂದ ಅವರಿಗೂ ಕೂಡ ಸ್ಫೂರ್ತಿ ಸಿಕ್ಕಿದ್ದು, ಕ್ಲಾಸ್‍ನಲ್ಲೇ ಮಗು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಎಲ್ಲರೂ ಬಬಿತಾಗೆ ಶುಭಕೋರಿದ್ದು, ಆಕೆ ಪರೀಕ್ಷೆ ಬರೆಯಲು ಬಂದಿದ್ದಕ್ಕೆ ಖುಷಿ ಪಟ್ಟರು. ಅದರಲ್ಲೂ ರಾಜ್ಯ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಖುದ್ದಾಗಿ ಬಂದು ಬಬಿತಾ ಅವರನ್ನ ಶ್ಲಾಘಿಸಿದರು ಎಂದು ವರದಿಯಾಗಿದೆ.