ಕೊಪ್ಪಳ: ಡೀಸೆಲ್ ಟ್ಯಾಂಕರ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ಲ- ಬನ್ನಿಕೊಪ್ಪ ಗ್ರಾಮಗಳ ನಡುವೆ ನಡೆದಿದೆ.
ಚನ್ನಪ್ಪ ಈರಪ್ಪ ಹಡಪದ(32), ಈರಮ್ಮ ಹಡಪದ(50), ಮೌಲಾಭಿ(55) ಮತ್ತು ಮಹ್ಮದ್ ರಾಜಾಸಾಬ್ ಕವಲೂರು(20) ಮೃತ ದುರ್ದೈವಿಗಳು. ಮೃತರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದವರು ಎಂದು ಗುರುತಿಸಲಾಗಿದೆ. ಅಪಘಾತದಿಂದಾಗಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ ಟ್ರ್ಯಾಕ್ಟರ್ ನಲ್ಲಿ ಕೂಲಿ ಕೆಲಸಕ್ಕಾಗಿ ಕುಕನೂರಿನಿಂದ ಕೊಪ್ಪಳಕ್ಕೆ ಹೋಗುತ್ತಿದ್ದರು. ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಡೀಸೆಲ್ ಟ್ಯಾಂಕರ್ ಬರುತ್ತಿತ್ತು. ಈ ವೇಳೆ ಅತಿವೇಗವಾಗಿ ಬಂದ ಡೀಸೆಲ್ ಟ್ಯಾಂಕರ್ ಹಿಂಬದಿಯಿಂದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಘಟನೆ ಸಂಬಂಧ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.