ಚಿತ್ರದುರ್ಗ: ಆಂದ್ರಪ್ರದೇಶ ಹಾಗು ಕನಾಟಕ ರಾಜ್ಯಗಳ ಗಡಿರೇಖೆಯಲ್ಲಿರೋ ಗ್ರಾಮ. ಈ ಗ್ರಾಮದಲ್ಲಿ ಕನ್ನಡ ಮಾತನಾಡುವರು ತುಂಬಾನೇ ವಿರಳ ಹಾಗೂ ಕನ್ನಡ ಕಲಿಯಬೇಕಾದರೆ ಸರ್ಕಾರಿ ಶಾಲೆಗಳಿಗೆ ಹೋಗಬೇಕಾಗುತ್ತದೆ. ಗಡಿಭಾಗದಲ್ಲಿ ಕನ್ನಡವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಯುವಕನೋರ್ವ ಗ್ರಾಮಸ್ಥರ ನೆರವಿನೊಂದಿಗೆ ಸಾರ್ವಜನಿಕ ಗ್ರಂಥಾಲಯವನ್ನು ತೆರೆದಿದ್ದಾರೆ. ಗ್ರಾಮದ ಗೃಂಥಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಆಂಧ್ರದ ಗಡಿ ಗ್ರಾಮವೆನಿಸಿರೋ ಉಡೇವು ಗ್ರಾಮದ ಗ್ರಂಥಾಲಯದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಗ್ರಾಮದ ಯುವಕ ರಾಘವೇಂದ್ರ ತೆರೆದಿರೋ ಸಾರ್ವಜನಿಕ ಗ್ರಂಥಾಲಯ ಸುತ್ತಮುತ್ತಲ ನಾಲ್ಕೈದು ಹಳ್ಳಿಗಳ ವಿದ್ಯಾರ್ಥಿಗಳು ಹಾಗು ಹಿರಿಯ ಗ್ರಾಮಸ್ಥರಿಗೆ ಮಾಹಿತಿ ಕೇಂದ್ರವಾಗಿದೆ. ರಾಘವೇಂದ್ರ ಹೆಚ್ಚು ಓದಿದವರಲ್ಲ, ಆದ್ರೆ ಕನ್ನಡ ನಾಡು ನುಡಿಯ ಮೇಲೆ ಅಪಾರ ಗೌರವ, ಪ್ರೀತಿ ಹೊಂದಿರುವಂತಹ ವ್ಯಕ್ತಿ ಆಗಿದ್ದಾರೆ.
ಗಡಿ ಗ್ರಾಮದಲ್ಲಿರೋ ಜನರು ಕೂಡ ಎಲ್ಲ ವಿಚಾರವನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬೇಕು. ಗ್ರಾಮಸ್ಥರು ಕನ್ನಡವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಕನ್ನಡದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರ ಸಹಯೋಗದಲ್ಲಿ ಗ್ರಂಥಾಲಯವನ್ನು ತೆರೆದಿದ್ದಾರೆ. ನಿತ್ಯವೂ ಪತ್ರಿಕೆ ಮಾರಾಟದಿಂದ ಬರುವ ಹಣದಲ್ಲಿ ಈ ಗ್ರಂಥಾಲಯ ನಡೆಯುತ್ತಿದ್ದೂ, ಎಲ್ಲಾ ದಿನಪತ್ರಿಕೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತರಿಸಿ, ಕೆಲವರಿಂದ ಅಪರೂಪದ ಹಾಗು ಆಕರ್ಷಕ ಪುಸ್ತಕಗಳನ್ನು ಸಂಗ್ರಹಿಸಿಡುವ ಮೂಲಕ ಸರ್ಕಾರದ ನೆರವಿಲ್ಲದೇ ಗ್ರಂಥಾಲಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಈ ಗ್ರಾಮದಲ್ಲಿ ನಿರುಪಯುಕ್ತವಾಗಿದ್ದ ಗ್ರಾಮ ಪಂಚಾಯತಿಯ ಕಟ್ಟಡವೊಂದನ್ನು ಸ್ವಚ್ಛಗೊಳಿಸಿ ತೆರೆದಿರೊ ಗ್ರಂಥಾಲಯ, ಗ್ರಾಮಸ್ಥರು ಹಾಗು ವಿದ್ಯಾರ್ಥಿಗಳ ನೆಚ್ಚಿನ ತಾಣವೆನಿಸಿದೆ. ಹೀಗಾಗಿ ಈ ಗ್ರಂಥಾಲಯವನ್ನು ಇನ್ನಷ್ಟು ಅಭಿವೃದ್ದಿಪಡಿಸಿ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ನಿಶ್ಚಿಂತೆಯಿಂದ ಅಭ್ಯಾಸ ಮಾಡುವಂತಹ ಅವಕಾಶ ಕಲ್ಪಿಸುವ ಉದ್ದೇಶವನ್ನು ರಾಘವೇಂದ್ರ ಹೊಂದಿದ್ದಾರೆ. ಆದ್ದರಿಂದ ಈ ಗ್ರಂಥಾಲಯಕ್ಕೆ ಅತಿ ಮುಖ್ಯವಾಗಿ ಇನ್ನಷ್ಟು ಪುಸ್ತಕಗಳು ಹಾಗು ಪೀಠೋಪಕರಣಗಳ ಕೊರತೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಿ ಗಡಿಗ್ರಾಮದಲ್ಲಿ ಕನ್ನಡ ಉಳಿಸಲು ಸಹಕರಿಸಿ ಅಂತ ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥರು ಹೇಳುತ್ತಾರೆ.
ಒಟ್ಟಾರೆ ಆಂಧ್ರ ಗಡಿ ಭಾಗದಲ್ಲಿ ಕನ್ನಡ ನಶಿಸಿ ಹೋಗುತ್ತಿರುವ ಬೆನ್ನಲ್ಲೆ ಕನ್ನಡವನ್ನ ಉಳಿಸಿಬೇಕು ಮತ್ತು ಅಲ್ಲಿನ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡಬೇಕು ಅಂತ ಗ್ರಂಥಾಲಯ ತೆಗೆದಿರೊ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ಹೀಗಾಗಿ ಸರ್ಕಾರ, ಸಂಘ ಸಂಸ್ಥೆಗಳು ಈ ಗಡಿ ಭಾಗದ ಸಾರ್ವಜನಿಕ ಗ್ರಂಥಾಲಯಕ್ಕೆ ನೆರವು ನೀಡಲಿ. ಅಗತ್ಯ ಪೀಠೋಪಕರಣಗಳು ಹಾಗು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಈ ಗ್ರಂಥಾಲಯವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಿ ಕನ್ನಡ ಪ್ರೇಮವನ್ನು ಮೆರೆಯಲಿ ಅನ್ನೋದು ನಮ್ಮ ಆಶಯವಾಗಿದೆ.
https://www.youtube.com/watch?v=eZNoquhNdPs