ಥಾಣೆ: ತನ್ನ ಒಂದು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಥಾಣೆ ಪೊಲೀಸರು ಮಹಿಳೆ ಹಾಗೂ ಇತರೆ ಮೂವರನ್ನು ಇಲ್ಲಿನ ಭಿವಾಂಡಿಯಲ್ಲಿ ಬಂಧಿಸಿದ್ದಾರೆ.
ಆರೋಪಿಯಾದ 21 ವರ್ಷದ ಮಹಿಳೆ 2016ರ ಮಾರ್ಚ್‍ನಲ್ಲಿ ಮದುವೆಯಾಗಿದ್ದು, ಒಬ್ಬ ಮಗನಿದ್ದ. ಆದ್ರೆ ಗಂಡ ಹೆಂಡತಿ ನಡುವೆ ಜಗಳಗಳಾಗಿ 4 ತಿಂಗಳಿನಿಂದ ಪ್ರತ್ಯೇಕವಾಗಿ ವಾಸವಿದ್ದರು. ನಂತರ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದು, ಮಗುವಿನಿಂದ ಮುಕ್ತಿ ಪಡೆಯಬೇಕು ಎಂದುಕೊಂಡಿದ್ದಳು. ಹೀಗಾಗಿ ಮಂಗಳವಾರ ರಾತ್ರಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಂಕೋಲಿ ಗ್ರಾಮದ ಕೈಗಾರಿಕಾ ಕಾಂಪೌಂಡ್‍ನಲ್ಲಿ ಮೃತದೇಹವನ್ನ ಹೂತಿದ್ದಾರೆ ಎಂದು ನಾರ್ಪೊಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಎಸ್‍ಡಿ ಜಾಧವ್ ಹೇಳಿದ್ದಾರೆ.
ಮಹಿಳೆಯ ಗಂಡನಿಗೆ ಸಂಶಯ ಮೂಡಿ ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರರಣೆ ನಡೆಸಿದ ಪೊಲೀಸರು ಬುಧವಾರದಂದು ಬಾಲಕನ ಮೃತದೇಹವನ್ನ ಪತ್ತೆಹಚ್ಚಿದ್ದಾರೆ. ಸ್ಥಳೀಯ ತಹಶಿಲ್ದಾರ್ ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹವನ್ನ ವಶಪಡಿಸಿಕೊಂಡಿದ್ದು, ಭಿವಾಂಡಿಯ ಐಜಿಎಮ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಜಾಧವ್ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201 ಹಾಗೂ 34 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
