ನವದೆಹಲಿ: ಅಪ್ರಚೋದಿತ ದಾಳಿ ನಡೆಸಿ ಭಾರತದ ಯೋಧರು ಹಾಗೂ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನ ಕ್ಕೆ ಭಾರತ ತಕ್ಕ ತಿರುಗೇಟು ನೀಡಿದ್ದು, ಬಿಎಸ್‍ಎಫ್ ಯೋಧರು ಪಾಕ್ ನೊಂದಿಗೆ ಗಣರಾಜ್ಯೋತ್ಸವದ ಸಿಹಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.
ದೇಶದ ರಾಷ್ಟ್ರೀಯ ಹಬ್ಬಗಳ ಪ್ರಯುಕ್ತ ನೆರೆಯ ರಾಷ್ಟ್ರಗಳೊಂದಿಗೆ ಶುಭಕೋರಿ ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಹಲವು ವರ್ಷಗಳಿಂದ ರೂಢಿಯಲ್ಲಿದೆ. ಆದರೆ ಈಗ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಮತ್ತು ಅಂತರಾಷ್ಟ್ರೀಯ ಗಡಿ(ಐಬಿ) ಬಳಿ ಪಾಕಿಸ್ತಾನದ ಯೋಧರು ನಿರಂತರ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‍ಎಫ್ ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಳ್ಳದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಪಾಕ್ ಹಾಗೂ ಭಾರತದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗಣರಾಜ್ಯೋತ್ಸವ ದಿನದಂದು ಶುಭಾಶಯಗಳನ್ನು ತಿಳಿಸಿ ಸಿಹಿ ಹಂಚಿಕೆ ಮಾಡುವುದಿಲ್ಲ ಎಂದು ಗುರುವಾರ ಪಾಕಿಸ್ತಾನದ ರೇಂಜರ್ಸ್ ಗೆ ಮಾಹಿತಿ ನೀಡಲಾಗಿದೆ ಎಂದು ಬಿಎಸ್‍ಎಫ್ ಮೂಲಗಳು ತಿಳಿಸಿದೆ.
ಎರಡು ದೇಶಗಳ ಯೋಧರು ವಿಶೇಷ ಸಂದರ್ಭಗಳಾದ ಈದ್, ದೀಪಾವಳಿ ಹಾಗೂ ಎರಡು ದೇಶಗಳ ರಾಷ್ಟ್ರೀಯ ಹಬ್ಬಗಳ ದಿನದಂದು ಸಿಹಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ದೇಶದ ಪ್ರಮುಖ ಗಡಿ ಪ್ರದೇಶವಾದ ಅಮೃತಸರದಿಂದ 30 ಕಿಮೀ ದೂರವಿರುವ ವಾಘಾ ಗಡಿಯಲ್ಲಿ ಸಿಹಿ ಹಂಚಿ ಎರಡು ದೇಶಗಳ ಸೈನಿಕರು ಸಂಭ್ರಮಿಸುತ್ತಿದ್ದರು.
ಸಿಹಿ ಹಂಚಿಕೆ ಮಾಡದೇ ಇರುವ ನಿರ್ಧಾರ ಇದೇ ಮೊದಲ ಬಾರಿಗೆ ತೆಗೆದುಕೊಂಡಿಲ್ಲ. ಕಳೆದ 4-5 ವರ್ಷ ಕೆಲ ಸಂದರ್ಭದಲ್ಲಿ ಸೇನೆ ಸಿಹಿ ಹಂಚಿಕೊಳ್ಳಲು ನಿರಾಕರಿಸಿತ್ತು.
https://www.youtube.com/watch?v=eysit8Uq8ns