ಮೈಸೂರು: ಮಹಾನಗರಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಹಿಂಬದಿ ಬಾಗಿಲಿಂದ ಬಂದು ಹೈಜಾಕ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ನಗರಪಾಲಿಕೆ ಕಾಂಗ್ರೆಸ್ ಸದಸ್ಯೆ ಭಾಗ್ಯವತಿ ಜೆಡಿಎಸ್ ನಾಯಕರ ಜೊತೆ ಪ್ರತ್ಯಕ್ಷವಾಗಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ, ಸಾರಾ.ಮಹೇಶ್ ಜೊತೆ ಭಾಗ್ಯವತಿ ಬಂದಿದ್ದು, ಜೆಡಿಎಸ್-ಬಿಜೆಪಿ ಬೆಂಬಲಿತವಾಗಿ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಸಾ.ರಾ. ಮಹೇಶ್, ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯಲು ಕಾಂಗ್ರೆಸ್ ಮೀಸಲಾತಿ ಅಸ್ತ್ರ ಬಳಸಿದ್ರು. ಜೆಡಿಎಸ್ ವರಿಷ್ಟರ ಜೊತೆ ಮಾತುಕತೆ ಮಾಡಿ ರಣತಂತ್ರ ರೂಪಿಸಿದ್ದೇವೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಭಾಗ್ಯವತಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದ್ರು.
ಇದೀಗ ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳ ಸ್ಪರ್ಧೆ ಮಾಡುತ್ತಿದ್ದು, ಬಹುತೇಕ ಭಾಗ್ಯವತಿ ಗೆಲ್ಲುವ ಸಾಧ್ಯತೆ ಇದೆ. ಈ ಮೂಲಕ ಜೆಡಿಎಸ್-ಬಿಜೆಪಿ ಕಾಂಗ್ರೆಸ್‍ಗೆ ಶಾಕ್ ನೀಡಿವೆ. ನಿರೀಕ್ಷೆ ಮೀರಿದ ಬೆಳವಣಿಗೆ ಕಂಡು ಕಾಂಗ್ರೆಸ್ ಬೆರಗಾಗಿದೆ. ಇದೊಂದು ಅಪವಿತ್ರ ಮೈತ್ರಿ ಎಂದು ಕಾಂಗ್ರೆಸ್ ಶಾಸಕ ವಾಸು ಕಿಡಿ ಕಾರಿದ್ದಾರೆ.
ಇವತ್ತು ಬೆಳಗ್ಗೆ 11.30 ಕ್ಕೆ ಪಾಲಿಕೆಯಲ್ಲಿ ಚುನಾವಣೆ ನಡೆಯಲಿದೆ. ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು, ಪರಶಿಷ್ಟ ವರ್ಗದ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿದೆ. ಕಾಂಗ್ರೆಸ್‍ನಲ್ಲಿ ಮಾತ್ರ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯರು ಇರುವುದು. ಕಾಂಗ್ರೆಸ್‍ನ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರಾದ ಕಮಲಾ ಉದಯ್ ಹಾಗೂ ಭಾಗ್ಯಲಕ್ಷ್ಮಿ ಮೇಯರ್ ಸ್ಥಾನದ ಅರ್ಹ ಆಕಾಂಕ್ಷಿಗಳು. ಹೀಗಾಗಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ ಅನಿವಾರ್ಯವಾಗಿತ್ತು.
65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 20, ಜೆಡಿಎಸ್ 20, ಬಿಜೆಪಿ 15, ಎಸ್‍ಡಿಪಿಐ 2, ಪಕ್ಷೇತರ 8 ಸದಸ್ಯರು ಇದ್ದಾರೆ. ಇದರ ಜೊತೆ ಶಾಸಕರು ಮತ್ತು ಸಂಸದರ ಮತ ಸೇರಿ 74 ಮತಗಳು ಇವೆ. ನಾಲ್ಕು ವರ್ಷದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಆಡಳಿತ ಇತ್ತು. ಈ ಬಾರಿ ಮೀಸಲು ಪ್ರಕಾರ ಜೆಡಿಎಸ್ – ಬಿಜೆಪಿಯಲ್ಲಿ ಅರ್ಹ ಸದಸ್ಯರು ಇಲ್ಲದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು. ಆದ್ರೆ ಸಿಎಂ ಮೀಸಲಾತಿ ತಂತ್ರಕ್ಕೆ ಜೆಡಿಎಸ್- ಬಿಜೆಪಿ ತಿರುಗೇಟು ನೀಡಿವೆ.
ಮೈಸೂರು ಮಹಾ ನಗರ ಪಾಲಿಕೆ ಕೊನೆ ಅವಧಿಯ ಆಡಳಿತ ಹಿಡಿಯುವ ಸಿಎಂ ಪ್ಲಾನ್‍ಗೆ ಜೆಡಿಎಸ್ ತಿರುಮಂತ್ರ ಹಾಕಿದಂತಾಗಿದೆ.