ದಾವಣಗೆರೆ: ಮಾರಾಟ ಮಾಡಿದ್ದ ಐದು ತಿಂಗಳ ಹೆಣ್ಣು ಶಿಶುವನ್ನು ದಿಟ್ಟ ಮಹಿಳೆಯೊಬ್ಬರು ಹೋರಾಟ ಮಾಡಿ ವಾಪಸ್ ತನ್ನ ಮಡಿಲಿಗೆ ಪಡೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕ ಬಿದರಿ ಗ್ರಾಮದಲ್ಲಿ ನಡೆದಿದೆ.
ಶಾಂತಮ್ಮ ಮಗುವನ್ನು ಕರೆತಂದ ದಿಟ್ಟ ಮಹಿಳೆ. ಶಾಂತಮ್ಮ ದಾವಣಗೆರೆಯ ಹೊಸಬಾತಿ ಗ್ರಾಮದ ಸಿದ್ದೇಶ್ ಎನ್ನುವವರನ್ನು ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು. 2017ರ ಆಗಸ್ಟ್ 21 ರಂದು ದಂಪತಿಗೆ ಅವಳಿ ಜವಳಿ ಶಿಶುಗಳು ಜನಿಸಿದ್ದವು. ಅವಳಿ ಜವಳಿ ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗು ಹುಟ್ಟಿತ್ತು. ಆದ್ರೆ ಹಣದ ಅಸೆಗಾಗಿ ಗಂಡ ಸಿದ್ದೇಶ್ ಹುಟ್ಟಿದ ಹೆಣ್ಣುಶಿಶು ಸಾವನ್ನಪ್ಪಿದೆ ಎಂದು ಹೇಳಿ ಬೇರೆಯವರಿಗೆ ಮಾರಾಟ ಮಾಡಿದ್ದ.
ಕೆಲ ದಿನಗಳ ನಂತರ ಮಗುವನ್ನು ಮಾರಾಟ ಮಾಡಿದ ವಿಷಯ ತಿಳಿದು ಕಂಗಾಲದ ಶಾಂತಮ್ಮ, ಮಗುವನ್ನು ಎಷ್ಟೇ ಕಷ್ಟ ಬಂದ್ರು ಸಾಕಿ ಬೆಳೆಸುತ್ತೇನೆಂದು ಹೋರಾಟ ನಡೆಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯ ಪಡೆದಿದಿದ್ದರು. ಇದೀಗ ಮಗು ತಾಯಿಯ ಮಡಿಲು ಸೇರಿದೆ. ಗಂಡನ ಮನೆ ತೊರೆದು ಇಬ್ಬರು ಶಿಶುಗಳನ್ನು ತೆಗೆದುಕೊಂಡು ತವರು ಮನೆ ಸೇರಿದ ದಿಟ್ಟ ಮಹಿಳೆ ಶಾಂತಮ್ಮ ಸಂತೋಷದಿಂದ ತನ್ನ ಮಡಿಲಲ್ಲಿ ಮಕ್ಕಳನ್ನ ಆಟವಾಡಿಸುತ್ತಿದ್ದಾರೆ.
ಆದ್ರೆ ಮಗುವನ್ನು ವಾಪಾಸ್ಸು ಕೊಡುವಂತೆ ಬೆದರಿಕೆ ಹಾಕಿ ಫೋನ್ ಕರೆ ಮಾಡಿ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರ ಹೆಸರಲ್ಲಿ ಅವಾಜ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಬೆದರಿಕೆಗೆ ಜಗ್ಗದೇ ಎಷ್ಟೇ ಕಷ್ಟ ಬಂದರೂ ಕೂಲಿ ಮಾಡಿ ಸಾಕುತ್ತೇನೆ ಎಂದು ಅವಳಿ ಜವಳಿ ಮಕ್ಕಳನ್ನ ಶಾಂತಮ್ಮ ಪೋಷಣೆ ಮಾಡುತ್ತಿದ್ದಾರೆ.
https://www.youtube.com/watch?v=XGZHEr2nhyQ