ಗದಗ: ಹನಿ ಕೇಕ್ ತಿಂದು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಅಸ್ವಸ್ಥಗೊಂಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥಗೊಂಡವರು ಎಲ್ಲರೂ ಆದ್ರಹಳ್ಳಿ ಉಮೇಶ ವಡ್ಡರ್ ಎಂಬವರ ಕುಟುಂಬಸ್ಥರು ಎನ್ನಲಾಗಿದೆ. ಸಮೀಪದ ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ವೆಂಕಟೇಶ ಬೇಕರಿಯಿಂದ ನಿನ್ನೆ ಹನಿ ಕೇಕ್ ತರಲಾಗಿತ್ತು. 19 ವರ್ಷದ ಯುವತಿ ಸೇರಿ ಇನ್ನುಳಿದವರು 2 ರಿಂದ 14 ವಯಸ್ಸಿನ ಮಕ್ಕಳು ಎನ್ನಲಾಗಿದೆ.
ತನುಶ್ರೀ(2), ಅಶ್ವಿನಿ(2), ಜಯಶ್ರೀ(3), ಸಪ್ನ(4), ನೀಲವ್ವ, ಸುವರ್ಣ, ನೇತ್ರಾ, ಷಣ್ಮುಖ, ಉಡಚವ್ವ, ಪ್ರವೀಣ ಅಸ್ವಸ್ಥಗೊಂಡವರು. ಗುರುವಾರ ರಾತ್ರಿ ಹನಿ ಕೇಕ್ ತಿಂದು ಮಲಗಿದವರು ಮಧ್ಯ ರಾತ್ರಿ ವಾಂತಿ ಭೇದಿಯಿಂದ ನರಳಾಡಲಾರಂಭಿಸಿದರು.
ಅಸ್ವಸ್ಥರನ್ನು ಲಕ್ಷ್ಮೇಶ್ವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.