ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

Public TV
2 Min Read
JALANDAR NAYAL

ಭುವನೇಶ್ವರ್: ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ ತಂದೆಯೊಬ್ಬರು ಬೆಟ್ಟವನ್ನೇ ಕಡಿದು ಸುಮಾರು 15 ಕಿ.ಮೀ ರಸ್ತೆ ನಿರ್ಮಿಸುತ್ತಿರುವ ಘಟನೆ ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ನಡೆದಿದೆ.

ಜಲಂಧರ್ ನಾಯಕ್, ತಮ್ಮ ಗ್ರಾಮವಾದ ಗುಮ್ಸಾಹಿಯಿಂದ ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಎರಡು ವರ್ಷಗಳಿಂದ ಪ್ರತಿದಿನ 8 ಗಂಟೆ ಕೆಲಸ ಮಾಡಿ 15 ಕಿ.ಮೀ ರಸ್ತೆ ನಿರ್ಮಿಸಲು ಒಬ್ಬರೇ ಶ್ರಮಿಸುತ್ತಿದ್ದಾರೆ.

ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿರುವ ಜಲಂದರ್ ನಾಯಕ್(45) ಅವರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು ಸುಮಾರು 15 ಕಿ.ಮೀ. ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲ. ಹೀಗಾಗಿ ತಮ್ಮ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

odisha

ಕಳೆದ ಎರಡು ವರ್ಷಗಳಿಂದ ಸುತ್ತಿಗೆ ಮತ್ತು ಉಳಿ ಹಿಡಿದು ದಿನದ 8 ಗಂಟೆ ದುಡಿದು ಈಗಾಗಲೇ 8 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿ ಜಿಲ್ಲಾಡಳಿತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‍ಆರ್ ಇಜಿಎಸ್) ಅಡಿಯಲ್ಲಿ ಅವರ ಕೆಲಸಕ್ಕೆ ಸಂಬಳ ಪಾವತಿ ಮಾಡುವುದರ ಜೊತೆಗೆ ಸನ್ಮಾನ ಮಾಡಲು ನಿರ್ಧಾರ ಮಾಡಿದ್ದಾರೆ.

ಈ ಹಿಂದೆ ಬಿಹಾರದ ದಶರತ್ ಮಂಝಿ ಅವರು ಸುಮಾರು 360 ಅಡಿ ರಸ್ತೆಯನ್ನು ನಿರ್ಮಿಸಲು 22 ವರ್ಷಗಳಷ್ಟು ಕಾಲ ಶ್ರಮಿಸಿ ಸುದ್ದಿಯಾಗಿದ್ದರು. ಈಗ ನಾಯಕ್ ಎರಡು ವರ್ಷಗಳಲ್ಲಿ 8 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿದ್ದಾರೆ. ಇನ್ನು ಮೂರು ವರ್ಷಗಳಲ್ಲಿ 7 ಕಿ.ಮೀ. ವಿಸ್ತರಿಸಬೇಕೆಂದು ಯೋಜನೆ ಮಾಡಿಕೊಂಡಿದ್ದಾರೆ.

ನಾಯಕ್ ತಮ್ಮ ಮೂವರು ಮಕ್ಕಳು ಶಾಲೆಗೆ ಹೋಗಲು ಎದುರಿಸುತ್ತಿದ್ದ ಸಮಸ್ಯೆಗಳೇ ಅವರಿಗೆ ಸುತ್ತಿಗೆ ಮತ್ತು ಉಳಿಗೆಯನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ. ಆದ್ರೆ ಈವರೆಗೆ ಇವರ ಶ್ರಮವನ್ನ ಯಾರು ಕೂಡ ಗಮನಿಸಿರಲಿಲ್ಲ. ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿಗಳನ್ನ ಓದಿದ ನಂತರ ಜಿಲ್ಲಾಧಿಕಾರಿ ಬೃಂದಾ, ನಾಯಕ್ ಅವರನ್ನ ಕಚೇರಿಗೆ ಕರೆಸಿ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ. ಜೊತೆಗೆ ನಾಯಕ್ ಅವರ ಜೊತೆಗೆ ಕೆಲಸಗಾರರನ್ನ ನಿಯೋಜಿಸಿ ರಸ್ತೆ ಕಾಮಗಾರಿ ಪೂರ್ಣಳಿಸುವಂತೆ ಫುಲ್ಬನಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ)ಗಳಿಗೆ ಸೂಚನೆ ನೀಡಿದ್ದಾರೆ.

ನಾಯಕ್ ಮತ್ತು ಅವರ ಕುಟುಂಬ ಮಾತ್ರ ಗುಮ್ಸಾಹಿ ಗ್ರಾಮದ ನಿವಾಸಿಗಳಾಗಿದ್ದು, ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಅಗತ್ಯ ಸೌಕರ್ಯಗಳ ಕೊರತೆಯಿಂದಾಗಿ ಇತರರು ಬಹಳ ಹಿಂದೆಯೇ ಗ್ರಾಮವನ್ನು ತೊರೆದ್ದರು. ನಾಯಕ್ ತರಕಾರಿಗಳನ್ನು ಮಾರಾಟ ಮಾಡುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ಗುರುತಿಸಿ ಸಹಾಯ ಮಾಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ. “ನಮ್ಮ ಹಳ್ಳಿಗೆ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ನನಗೆ ಭರವಸೆ ನೀಡಿದ್ದಾರೆ” ಎಂದು ನಾಯಕ್ ಹೇಳಿದ್ದಾರೆ.

ನಾಯಕ್ ಅವರ ಪರಿಶ್ರಮ ಮತ್ತು ಕೆಲಸಕ್ಕಾಗಿ ಕಂಧಾಮಾಲ್ ಉತ್ಸವದ ಸಮಯದಲ್ಲಿ ಅವರನ್ನು ಗೌರವಿಸಲು ಯೋಚನೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಬೃಂದಾ ತಿಳಿಸಿದ್ದಾರೆ.

Jalandhar Nayak

 

Share This Article
Leave a Comment

Leave a Reply

Your email address will not be published. Required fields are marked *