ಯಾದಗಿರಿ: ಇಷ್ಟು ದಿನ ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಕ್ಯಾತೆ ತೆಗೆಯುತ್ತಿದ್ದ ತೆಲಂಗಾಣ ಸರ್ಕಾರ, ಈಗ ಮರಳಿಗಾಗಿ ಗಡಿ ಪ್ರದೇಶ ನಮಗೆ ಸೇರಬೇಕೆಂದು ಪಟ್ಟು ಹಿಡಿದಿದೆ. ಗಡಿ ಪ್ರದೇಶದಲ್ಲಿರೋ ಹಳ್ಳದ ಭಾಗ ನಮ್ಮ ರಾಜ್ಯಕ್ಕೆ ಸೇರಿದೆ. ಹೀಗಾಗಿ ಮರಳು ಸಾಗಿಸುತ್ತೆವೆ ಎಂದು ಪಟ್ಟು ಹಿಡಿದಿದ್ದಾರೆ.
ಆದ್ರೆ ಕರ್ನಾಟಕದ ಅಧಿಕಾರಿಗಳು ಹಳ್ಳದ ಭಾಗ ನಮ್ಮ ವ್ಯಾಪ್ತಿಗೆ ಬರುತ್ತದೆ ಮರಳು ಸಾಗಣೆ ಮಾಡಲು ಬಿಡುವದಿಲ್ಲವೆಂದು ಖಾಕಿ ಪಡೆಯೊಂದಿಗೆ ಸರ್ಪಗಾವಲು ಹಾಕಿ ತೆಲಂಗಾಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಯಾದಗಿರಿಯ ಗಡಿ ಭಾಗದಲ್ಲಿರುವ ಚೇಲೇರಿ ಗ್ರಾಮದ ಹಳ್ಳದ ಗಡಿ ವಿವಾದ ಇನ್ನು ಕಗ್ಗಾಂಟಾಗಿ ಪರಿಣಮಿಸಿದೆ. ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಈಗಾಗಲೇ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಇನ್ನು ಈಗಾಗಲೇ ಗಡಿ ಪ್ರದೇಶ ವಿವಾದಲ್ಲಿದ್ದು, ವಿವಾದಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಬೇಡವೆಂದು ರಾಜ್ಯದ ಕಂದಾಯ ಅಧಿಕಾರಿಗಳು ಪಟ್ಟುಹಿಡಿದಿದ್ದಾರೆ. ತೆಲಂಗಾಣ ಅಧಿಕಾರಿಗಳು ಕರ್ನಾಟಕದ ಮರಳಿನ ಮೇಲೆ ಕಣ್ಣು ಹಾಕಿ, ಕೋಟ್ಯಾನುಗಟ್ಟಲೆ ಮರಳು ಗಣಿಗಾರಿಕೆಯಿಂದ ಆದಾಯ ಗಳಿಸಲು ಹುನ್ನಾರ ನಡೆಸಿದೆ. ಈಗಾಗಲೇ ಮರಳು ಸಾಗಣೆ ಕೂಡ ನಡೆಸಿದೆ.
ಮರಳುಗಾರಿಕೆಗೆ ರೈತರ ವಿರೋಧ: ಯಾವುದೇ ಕಾರಣಕ್ಕೂ ಹಳ್ಳದ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸುವುದು ಬೇಡವೆಂದು ಹಳ್ಳದ ತೀರದಲ್ಲಿನ ತೆಲಂಗಾಣದ ಭಾಗದ ಸುತ್ತಲಿನ ರೈತರು ಕೂಡ ಮಹಬೂಬನಗರ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ಅದೇ ರೀತಿ ನಮ್ಮ ರಾಜ್ಯದ ಹಳ್ಳದ ಭಾಗದಲ್ಲಿರುವ ರೈತರು ಕೂಡ ಚೇಲೇರಿ ಗ್ರಾಮದ ಹಳ್ಳ ಭಾಗದಲ್ಲಿ ಮರಳು ಗಣಿಕಾರಿಕೆ ನಡೆಸಲು ಅನುಮತಿ ನೀಡಬೇಡಿ. ಒಂದು ವೇಳೆ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ರೆ ಅಂತರ್ಜಲ ಕಡಿಮೆಯಾಗಲಿದೆ ಎಂದು ಉಭಯ ರಾಜ್ಯದ ರೈತರು ಒತ್ತಾಯ ಮಾಡಿದ್ದಾರೆ.
ಒಂದು ಕಡೆ ಚೇಲೇರಿ ಗ್ರಾಮದ ಹಳ್ಳದ ಭಾಗ ಸುಮಾರು 143 ಎಕರೆ ಪ್ರದೇಶ ನಮಗೆ ಸೇರುತ್ತದೆ ಎಂದು ರಾಜ್ಯದ ಕಂದಾಯ ಅಧಿಕಾರಿಗಳ ವಾದವಾಗಿದೆ. ಇನ್ನೊಂದು ಕಡೆ ತೆಲಂಗಾಣದ ಅಧಿಕಾರಿಗಳು ಹಳ್ಳದ ಪ್ರದೇಶ ಸುಮಾರು 40 ಎಕರೆಗೂ ಹೆಚ್ಚು ಪ್ರದೇಶ ನಮಗೆ ಸೇರುತ್ತದೆ ಎಂದು ವಾದಿಸುತ್ತಿದ್ದಾರೆ. ಉಭಯ ರಾಜ್ಯದ ಕಂದಾಯ ನಕಾಶೆಯಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲವಿದೆ. ನಕಾಶೆ ಪರಿಶೀಲಿಸಿದ್ರೂ, ಗಡಿ ಪ್ರದೇಶ ಕಗ್ಗಂಟು ಸಮಸ್ಯೆ ಪರಿಹಾರ ಕಾಣುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಖುದ್ದು ಉಭಯ ರಾಜ್ಯಗಳ ಅಧಿಕಾರಿಗಳು ಹಳ್ಳದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಸಮಸ್ಯೆ ಇನ್ನು ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ.
https://youtu.be/eK_a5jngGWg