ಲಕ್ನೋ: ಪ್ರೀತಿಸಿ ಮದುವೆಯಾದ 20 ದಿನದಲ್ಲೇ ಟ್ರೇನಿ ಐಐಎಸ್ ಅಧಿಕಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ.
2015ರ ಬ್ಯಾಚ್ನ ಟ್ರೇನಿ ಐಐಎಸ್(ಇಂಡಿಯನ್ ಇನ್ಫರ್ಮೇಷನ್ ಸರ್ವೀಸ್) ಅಧಿಕಾರಿ ದೀಪಕ್ ಸೆಕ್ಸೆನಾ ಮೃತ ದುರ್ದೈವಿ. ಇಟವಾ ಜಿಲ್ಲೆಯ ಸಮೀಪದ ಲಕ್ನೋ-ಆಗ್ರಾ ಹೆದ್ದಾರಿಯಲ್ಲಿ ಅಪಘಾತವಾಗಿ ಶನಿವಾರ ಸಾವನ್ನಪ್ಪಿದ್ದಾರೆ.
ದೀಪಕ್ ಸೆಕ್ಸೆನಾ ಶನಿವಾರ ಸಂಜೆ ತಮ್ಮ ತಾಯಿ, ಪತ್ನಿಯೊಂದಿಗೆ ಕಾರಿನಲ್ಲಿ ದೆಹಲಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಕಾರು ಹಲವು ಬಾರಿ ಪಲ್ಟಿ ಹೊಡೆಡು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರು ಪಲ್ಟಿ ಹೊಡೆದಿದ್ದನ್ನು ಕಂಡು ಹೆದ್ದಾರಿ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನ ಸ್ಥಳಕ್ಕೆ ಓಡಿ ಬಂದಿದ್ದಾರೆ. ನಂತರ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ವಿಷಯ ತಿಳಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ರು. ಆದರೆ ಅಷ್ಟರಲ್ಲಿ ದೀಪಕ್ ಮೃತಪಟ್ಟಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದೀಪಕ್ ತಾಯಿ, ಪತ್ನಿ ಮತ್ತು ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ದೀಪಕ್ ಇದೇ ಡಿಸೆಂಬರ್ 12ರಂದು ತಮ್ಮ ಗೆಳತಿ ಸಾಕ್ಷಿ ಜೊತೆ ಮದುವೆ ಆಗಿದ್ದರು. ಐದು ವರ್ಷಗಳ ಹಿಂದೆ ದೀಪಕ್ ಮತ್ತು ಸಾಕ್ಷಿ ಪರಿಚಯವಾಗಿದ್ದು, ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಆದರೆ ಈಗ ಈ ಅಪಘಾತದಿಂದ ಎರಡೂ ಕುಟುಂಬಗಳ ದುಃಖ ಮುಗಿಲು ಮುಟ್ಟಿದೆ.