ಬೆಂಗಳೂರು: ಕೆಳ ದಿನಗಳಿಂದ ಹೆಚ್ಚು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಖ್ಯಾತ ನಟ ಪ್ರಕಾಶ್ ರೈ ಅವರು ಇಂದು ಸ್ವತಃ ತಮ್ಮ ರಾಜಕೀಯ ಪ್ರವೇಶದ ಕುರಿತು ತಮ್ಮ ಮನದಾಳದ ಇಂಗಿತವನ್ನ ಹೊರ ಹಾಕಿದ್ದಾರೆ.
ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕಾರ ಬಳಿಕ ಮಾತನಾಡಿದ ಅವರು, ಇಂದು ದೇಶದಲ್ಲಿ ಮತೀಯ ರಾಜಕೀಯ ನಡೆಯುತ್ತಿದೆ. ಒಂದೇ ಧರ್ಮದವರು ಬಾಳಬೇಕು ಎನ್ನುವ ಹಿಟ್ಲರ್ ಸಂಸ್ಕೃತಿ ನಮ್ಮಲ್ಲಿದೆ. ನನಗೆ ರಾಜಕೀಯಕ್ಕೆ ಬರುವ ಆಸೆಯಿಲ್ಲ. ಹಾಗಂತ ಹೆಚ್ಚು ಒತ್ತಾಯ ಮಾಡಿದರೆ ರಾಜಕೀಯ ಪ್ರವೇಶ ಮಾಡುತ್ತೇನೆ. ತೊಡೆ ತಟ್ಟಿ ಬನ್ನಿ ಅಂದರೆ ಅದೇನು ದೊಡ್ಡ ವಿಷಯ ಅಲ್ಲ ಎಂದು ಮೂಲಕ ಪರೋಕ್ಷವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದರು.
ಲಂಕೇಶ್ ಅವರಿಂದ ನಾನು ಹೆಚ್ಚು ಪ್ರಭಾವಿತನಾದವನು. ನನ್ನ ಸ್ವಭಾವ ಗುರುಗಳಾದ ಲಂಕೇಶ್ ಹೇಳಿಕೊಟ್ಟ ಪಾಠ. ನಟ ಅಂತ ಇಂದು ನೀವು ನನಗೆ ಪ್ರಶಸ್ತಿ ನೀಡಿಲ್ಲ. ರಾಜಕೀಯ, ಸಮಾಜದ ಪರಿಸ್ಥಿತಿ ವಿರುದ್ಧ ಹೋರಾಟದ ಹಾದಿಗೆ ಧೈರ್ಯ ತುಂಬಲು ಈ ಪ್ರಶಸ್ತಿ ನೀಡಿದ್ದಿರಿ ಎಂದರು.
ಇದೇ ವೇಳೆ ಗೌರಿ ಹತ್ಯೆಯ ವಿಚಾರದಲ್ಲಿ ನಾನು ಧ್ವನಿ ಎತ್ತಿದ್ದೇನೆ. ಇಂತಹ ಹತ್ಯೆಗಳ ವಿರುದ್ಧ ಎಲ್ಲರೂ ಗಟ್ಟಿ ಧ್ವನಿ ಎತ್ತಬೇಕು. ಪತ್ರಕರ್ತರ ಧ್ವನಿ ಅಡಗಿಸುವ ಕೆಲಸ ಇಂದು ನಡೆಯುತ್ತಿದೆ. ಇದರ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕು. ಏನೇನೊ ಮಾತಾಡಿ ಮತ್ತೆ ಕ್ಷಮೆ ಕೇಳುವ ಕೆಲಸ ಇಂದು ಮಾಡುತ್ತಿದ್ದಾರೆ. ಕ್ಷಮೆ ಕೇಳಿದವರನ್ನು ಕ್ಷಮಿಸೋಣ ಆದರೆ ಅವರು ಆಡಿದ ಮಾತು ಮರೆಯೋದು ಬೇಡ ಎಂದು ಆರೋಪಿಸಿದರು.
ಇನ್ನು ಬೆಂದಕಾಳೂರಿನ ಈ ರಾಜ್ಯದಲ್ಲಿ ಇಂತಹವರ ಬೇಳೆ ಬೇಯಲು ಬಿಡಬಾರದು ಅಂತ ಪರೋಕ್ಷವಾಗಿ ಬಿಜೆಪಿಯನ್ನ ಅಧಿಕಾರ ತರಬೇಡಿ ಅಂತ ಕರೆಕೊಟ್ಟರು. ಏನೇ ಆದರು ನನ್ನ ಧ್ವನಿ ನಿಲ್ಲೋದಿಲ್ಲ. ಯಾರಿಗೂ ಹೆದರದೆ ಇನ್ನು ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಇನ್ನು ನಟ ಪ್ರಕಾಶ್ ರೈ ಅವರಿಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದು, ಸಮಾರಂಭದಲ್ಲಿ ಮಾತನಾಡಿದ ಸಿಎಂ ಅವರು, ಪ್ರಕಾಶ್ ರೈ ಏನು ತಪ್ಪು ಮಾತಾಡಿಲ್ಲ. ಆದರೂ ಅವರಿಗೆ ಬೆದರಿಕೆ ವಿರೋಧಗಳು ಬರುತ್ತಿವೆ. ಸಂವಿಧಾನದಲ್ಲಿ ಇರುವ ಅಂಶಗಳನ್ನು ಇವರು ಮಾತನಾಡುತ್ತಿದ್ದಾರೆ. ನಿಮ್ಮ ಕೆಲಸ ಉತ್ತಮವಾಗಿದೆ ಮುಂದುವರಿಸಿ. ನಿಮ್ಮ ಜೊತೆ ನಮ್ಮ ಸರ್ಕಾರ ಇರುತ್ತೆ ಎಂದು ಪ್ರಕಾಶ್ ರೈ ಹೋರಾಟಕ್ಕೆ ಬಹಿರಂಗವಾಗಿ ಸಿಎಂ ಬೆಂಬಲ ಸೂಚಿಸಿದರು.
https://www.youtube.com/watch?v=fVF7178-tHA