ಬೀದರ್: ಕೌಟುಂಬಿಕ ಸಮಸ್ಯೆ ಹಿನ್ನಲೆಯಿಂದಾಗಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.
ಈ ಘಟನೆ ಬೀದರ್ ನ ಮಂಗಲ್‍ಪೇಟೆ ಬಳಿ ನಡೆದಿದ್ದು, ಮೃತರನ್ನು ವಿನೋದ್(40), ಮಕ್ಕಳಾದ ಏಡಿಷನ್(10) ಮತ್ತು ಜೆನ್ನಿಫರ್(7) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋದ್ ಕುಟುಂಬ ಕ್ರಿಸ್ ಮಸ್ ಹಬ್ಬಕ್ಕೆಂದು ಬೀದರ್ ಗೆ ಬಂದಿದ್ದರು. ಕೌಟುಂಬಿಕ ಸಮಸ್ಯೆಯಿಂದ ವಿನೋದ್ ವಿಷ ಸೇವಿಸಿ ಮಕ್ಕಳಿಗೂ ನೀಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಗಂಡ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಪತ್ನಿ ಶಾಂಪಿಂಗ್ ಹೋಗಿದ್ದರು ಎಂದು ಹೇಳಲಾಗುತ್ತಿದ್ದು, ಆತ್ಮಹತ್ಯೆಯ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ. ಸಾಲಬಾಧೆಯಿಂದ ಆತ್ಯಹತ್ಯೆಗೆ ಶರಣರಾಗಿದ್ದಾರೆ ಎಂದು ಪತ್ನಿಯ ತಂದೆ ಆರೋಪ ಮಾಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.