ಮಂಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯ ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಕಳೆದ ಐದಾರು ದಿನಗಳಿಂದ ಘಾಟಿ ಪ್ರದೇಶದ ಹಲವೆಡೆ ಬೆಂಕಿ ಕೆನ್ನಾಲಿಗೆ ಬೀರುತ್ತಿದ್ದರೂ ಬೆಂಕಿ ನಂದಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿಲ್ಲ. ಹೀಗಾಗಿ ಅಮೂಲ್ಯ ಅರಣ್ಯ ಸಂಪತ್ತು ಸೇರಿದಂತೆ ವನ್ಯಜೀವಿಗಳು ಸುಟ್ಟು ಕರಕಲಾಗುತ್ತಿವೆ. ಮಾಹಿತಿ ಪ್ರಕಾರ ಅರಣ್ಯ ಒತ್ತುವರಿ ಮೂಲಕ ಎಸ್ಟೇಟ್ ಮಾಡಿಕೊಂಡಿರುವ ಮಾಫಿಯಾಗಳೇ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ.
ಪ್ರತಿ ವರ್ಷ ಒಂದೊಂದು ಭಾಗದಲ್ಲಿ ಬೆಂಕಿ ಹಚ್ಚುತ್ತಾ ಮುಂದಿನ ವರ್ಷ ಆ ಭಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಅರಣ್ಯಾಧಿಕಾರಿಗಳು ಸೇರಿ ಇಲಾಖೆಯ ಪ್ರಮುಖರಿಗೆ ಗೊತ್ತಿದ್ದೇ ಈ ಚಟುವಟಿಕೆ ನಡೆಯುತ್ತಿದೆ ಎನ್ನಲಾಗಿದೆ. ಇದೇ ರೀತಿ ಪಶ್ಚಿಮ ಘಟ್ಟದ ಹಲವು ಕಡೆ ರೆಸಾರ್ಟ್ ಮತ್ತು ಎಸ್ಟೇಟ್ ಮಾಫಿಯಾಗಳು ಹುಟ್ಟಿಕೊಂಡಿದೆ.
ಇದೀಗ ಅರಣ್ಯದಲ್ಲಿ ಬೆಂಕಿ ಕೆನ್ನಾಲಿಗೆ ಬೀರುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಥಳಕ್ಕೆ ಬಾರದೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಸಿದ್ಧ ಉತ್ತರದೊಂದಿಗೆ ನಿರ್ಲಕ್ಷ್ಯ ಭಾವನೆ ತೋರುತ್ತಾರೆ. ಅರಣ್ಯ ಸಚಿವ ರಮಾನಾಥ ರೈ ಅವರಲ್ಲಿ ಬೆಂಕಿ ಹತೋಟಿಗೆ ತರಲು ಹೆಲಿಕಾಪ್ಟರ್ ಬಳಸಬಹುದಲ್ಲ ಅಂದ್ರೆ, ಹಾಗೆಲ್ಲ ಹೆಲಿಕಾಪ್ಟರ್ ಬಳಕೆಗೆ ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ ಅಂತಾ ಮೂಗು ಮುರಿಯುತ್ತಾರೆ. ಸಚಿವರಿಂದ ತೊಡಗಿ ಅಧಿಕಾರಿಗಳವರೆಗೆ ಇಂಥ ನಿರ್ಲಕ್ಷ್ಯದ ಭಾವನೆ ಪಶ್ಚಿಮಘಟ್ಟದ ಅಮೂಲ್ಯ ಹಸಿರ ಸಿರಿ ಮತ್ತು ಜೀವ ಸಂಕುಲದ ನಾಶಕ್ಕೆ ಕಾರಣವಾಗುತ್ತಿದೆ.