ತುಮಕೂರು: ಕ್ರೂಸರ್ ವಾಹನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಮಂಜುನಾಥ್(35), ಮೊಹಮ್ಮದ್ ನೇಮತ್ ಉಲ್ಲಾ (42) ಮೃತ ದುರ್ದೈವಿಗಳಾಗಿದ್ದು, ಮೂಲತಃ ಶಿವಮೊಗ್ಗ ಮೂಲದವರು ಎಂದು ತಿಳಿದು ಬಂದಿದೆ.
ಹಿರಿಯೂರು ಕಡೆಯಿಂದ ಬರುತ್ತಿದ್ದ ಕ್ರೂಸರ್ ವಾಹನ ಶಿರಾ ಪಟ್ಟಣ ಆಂಜನೇಯ ದೇವಾಲಯದ ಬಳಿ ಇರುವ ಸೇತುವೆಗೆ ಡಿಕ್ಕಿ ಹೊಡೆದಿದೆ. ಕ್ರೂಸರ್ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನದಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ವೇಳೆ ಕ್ರೂಸರ್ ನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಶೇಖ್ ಅಬ್ದುಲ್ಲಾ, ಅಫ್ರಿದ್, ಖಲಂದರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.