ಯಾದಗಿರಿ: ಒಂದು ವರ್ಷ ಪ್ರೀತಿಸಿ ಒಂದು ತಿಂಗಳು ಸುತ್ತಾಡಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ನಡೆದಿದೆ.
ಭಾಗಮ್ಮ ಆತ್ಮಹತ್ಯೆಗೆ ಶರಣಾದ ಯುವತಿ. ಸೋಮವಾರ ಸಂಜೆ ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥಳಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಭಾಗಮ್ಮ ಮೃತಪಟ್ಟಿದ್ದಾಳೆ.
ನಡೆದಿದ್ದೇನು?
ವಡಗೇರಾ ಗ್ರಾಮದ ನಾಗರಾಜು ಎಂಬಾತ ಹಾಲಗೇರೆಯ ತನ್ನ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ. ಪಕ್ಕದ ಮನೆಯ ಭಾಗಮ್ಮನ ಜೊತೆ ಪ್ರೀತಿಯ ನಾಟಕವನ್ನು ಶುರುಮಾಡಿದ್ದಾನೆ. ಒಂದು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದ ವಿಚಾರ ಬಾಗಮ್ಮ ಪೋಷಕರಿಗೆ ತಿಳಿದಿರಲಿಲ್ಲ. ಹೀಗಾಗಿ ಭಾಗಮ್ಮ ಪೋಷಕರು ತಂಗಡಗಿ ಗ್ರಾಮದ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ನಡೆಸುತ್ತಾರೆ.
ಈ ವಿಚಾರ ತಿಳಿದ ನಾಗರಾಜು ಕಳೆದ ಒಂದು ತಿಂಗಳ ಹಿಂದೆ ತನ್ನ ನಾಲ್ಕು ಸ್ನೇಹಿತರ ಜೊತೆ ಗೂಡಿ ಭಾಗಮ್ಮನನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಗೆ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಸುತ್ತಾಡಿದ್ದಾನೆ. ಕೊನೆಗೆ ನನಗೆ ನೀನು ಇಷ್ಟ ಇಲ್ಲ, ಎಲ್ಲಾದರೂ ಹೋಗು ಎಂದು ಅರ್ಧದಲ್ಲಿಯೇ ಕೈ ಕೊಟ್ಟು ಪರಾರಿಯಾಗಿದ್ದಾನೆ.
ಬಳಿಕ ಭಾಗಮ್ಮ ದಿಕ್ಕು ತೋಚದೆ ಯಾರದೋ ಸಹಾಯ ಪಡೆದು ಮನೆಯವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾಳೆ. ನಂತರ ಪೋಷಕರು ಬಂದು ಆಕೆಯನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪೋಷಕರು ಡಿಸೆಂಬರ್ 13 ರಂದು ನಡೆದ ವಿಚಾರವನ್ನು ಹೇಳಿ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ನಾಗರಾಜು ಪೋಷಕರನ್ನ ಕರೆಸಿ ಇಬ್ಬರ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಭಾಗಮ್ಮ ನಾನು ನಾಗರಾಜು ಬಿಟ್ಟು ಬೇರೆ ಯಾರನ್ನು ಮದುವೆಯಾಗುವುದಿಲ್ಲ. ಇಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಆದರೆ ಸೋಮವಾರ ಮನನೊಂದು ವಿಷಸೇವಿಸಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.