ಚೆನ್ನೈ: ಇಲ್ಲಿನ ವಾಡಿಪಟ್ಟಿ ಬಳಿಯ ತನಿಚಿಯಂನಲ್ಲಿ ದಿಂಡಿಗುಲ್- ಮಧುರೈ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನೊಳಗೆಯೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.
ಈ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ನಡೆದಿದೆ. ಮೃತನನ್ನು ಆರ್ ಅಮರ್ ಸೇನ್(22) ಎಂದು ಗರುತಿಸಲಾಗಿದೆ. 6 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ ಅಂತ ವಿರುದುವಾಘ್‍ನಗರ್ ಎಸ್‍ಪಿ ಎಂ ರಾಜರಾಜನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
- Advertisement 2-
ಕರಿಮೆದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2011ರಲ್ಲಿ ನಡೆದ ರಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲಿ ಅಮರ್ ಮೂರನೇ ಆರೋಪಿಯಾಗಿದ್ದ. ಅಮರ್ ಕೊಲೆಯ ಹಿಂದೆ ರಾಮ್ ಪ್ರಸಾದ್ ಸಂಬಂಧಿಕರು ಹಾಗೂ ಗೆಳೆಯರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
- Advertisement 3-
- Advertisement 4-
ದಿಂಡಿಗುಲ್ ಜಿಲ್ಲೆಯ ಬಟ್ಲಗುಂಡುವಿನಿಂದ ಅರಪಾಳಯಂ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ನಲ್ಲಿ ಅಮರ್ ಸಂಚರಿಸುತ್ತಿದ್ದ. ಈ ವೇಳೆ ಬಸ್ ತನಿಚಿಯಂ ಬಳಿ ಹೋಗುತ್ತಿದ್ದಾಗ, ಚತುಷ್ಪಥ ಹೆದ್ದಾರಿಯಲ್ಲಿ ಕಾರ್ ಮತ್ತು 2 ಬೈಕ್ ನಲ್ಲಿ ಬಂದ 10 ಜನರ ತಂಡ ಬಸ್ಸನ್ನು ಅಡ್ಡಹಾಕಿತ್ತು. ನೋಡನೋಡುತ್ತಿದ್ದಂತೆಯೇ 10 ಮಂದಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಸ್ಸಿನೊಳಗೆ ನುಗ್ಗಿ ಮುಂಬದಿ ಸೀಟಲ್ಲಿ ಕುಳಿತಿದ್ದ ಅಮರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಅಮರ್ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಬಸ್ ನಿಂದ ಇಳಿದು ತಮ್ಮ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಸದ್ಯ ಘಟನೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 3 ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ.