ನವದೆಹಲಿ: ಯಾತ್ರಾರ್ಥಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪೀಠ(ಎನ್‍ಜಿಟಿ) ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ನಿಷೇಧ ಹೇರಿ ಆದೇಶ ಪ್ರಕಟಿಸಿದೆ.
ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತ್ರ ಕುಮಾರ್ ನೇತೃತ್ವದ ಎನ್ ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ. ದೇವಾಲಯದಲ್ಲಿ ಭಕ್ತರು ಯಾವುದೇ ಮಂತ್ರ ಮತ್ತು ಜೈಕಾರವನ್ನು ಹೇಳುವಂತಿಲ್ಲ ಎಂದು ಆದೇಶಿಸಿದೆ.
ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಆಡಳಿತವನ್ನು ವಶಕ್ಕೆ ಪಡೆದ ಪೀಠ ಈಗ ಈ ಆದೇಶವನ್ನು ಪ್ರಕಟಿಸಿದೆ.
ಅಮರನಾಥ ದೇವಾಲಯವನ್ನು ನೋಡಿಕೊಳ್ಳುವ ಆಡಳಿತ ಮಂಡಳಿಗೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಭಕ್ತರು ಸುಲಭವಾಗಿ ದರ್ಶನ ಮಾಡುವಂತಾಗಲು ಶಿವಲಿಂಗದ ಮುಂಭಾಗದಲ್ಲಿರುವ ಕಬ್ಬಿಣದ ಸರಳುಗಳನ್ನು ತೆಗೆಯುವಂತೆ ಆದೇಶ ನೀಡಿದೆ.
ಭಕ್ತರು ತಮ್ಮ ಮೊಬೈಲ್ ಮತ್ತು ಇತರೇ ವಸ್ತುಗಳನ್ನು ಕೊನೆಯ ಚೆಕ್ ಪೋಸ್ಟ್ ನಲ್ಲಿ ಇಡಬೇಕು. ಈ ವಸ್ತುಗಳನ್ನು ಇಡಲು ಬೋರ್ಡ್ ಒಂದು ಜಾಗವನ್ನು ನಿರ್ಮಿಸಬೇಕು ಎಂದು ಪೀಠ ಸೂಚಿಸಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ಪೀಠ ರಚಿಸಿದ್ದು, ಯಾತ್ರಿಗಳ ರಕ್ಷಣೆ ಸಂಬಂಧಿಸಿದಂತೆ ಯಾವುದೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಆ ಕ್ರಮಗಳನ್ನು ಬಗ್ಗೆ ಮೂರು ವಾರದಲ್ಲಿ ವರದಿ ನೀಡುವಂತೆ ಸಮಿತಿಗೆ ಆದೇಶಿಸಿದೆ.
ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಅಮರನಾಥ ಕ್ಷೇತ್ರ ಹಿಂದೂಗಳ ಪವಿತ್ರ ದೇವಾಲಯವಾಗಿದೆ.