ಬಾಗಲಕೋಟೆ: ಪರಿವರ್ತನಾ ಯಾತ್ರೆ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ನಡುವಳಿಕೆ ತಿದ್ದುಕೊಳ್ಳಲಿ. ಅವರ ಆಚಾರ-ವಿಚಾರ ಹಾಗೂ ಸಿದ್ಧಾಂತಗಳಲ್ಲಿ ಪರಿವರ್ತನೆಯಾಗಲಿ. ಆಗ ಮಾತ್ರ ರಾಜ್ಯದ ಜನತೆ ಅವರಿಗೆ ಮನ್ನಣೆ ಕೊಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾತನಾಡಿದ ಶರಣಪ್ರಕಾಶ್, ಹಿಂದೆ 5 ವರ್ಷದ ಬಿಜೆಪಿ ಅಧಿಕಾರಾವಧಿಯಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಮೊದಲು ಬಿಜೆಪಿ ಮುಖಂಡರು ಪರಿವರ್ತನೆಯಾಗಲಿ ಎಂದು ವ್ಯಂಗ್ಯವಾಡಿದರು. ಅಲ್ಲದೇ ನಾನು ನೆಗೆಟೀವ್ ಹಾಗೂ ಟೀಕೆ ಮಾಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ಆದರೆ ಬಿಜೆಪಿಯವರು ಬದಲಾಗಬೇಕು ಎಂದು ಹೇಳಿದ್ರು.
ರಾಜ್ಯದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಸಿಗುತ್ತವೆ. ಅಲ್ಲದೇ ರಾಜ್ಯದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಲು ಸಹಕಾರಿಯಾಗುತ್ತೆ. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರೋದು ನಿಜ. ಅದೇ ಉದ್ದೇಶದಿಂದಲೇ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನಿಗದಿಗಾಗಿ ರೈತರೊಂದಿಗೆ ಉಪಸಮತಿ ಸಭೆ ಕರೆಯಲಾಗಿದೆ ಸಭೆಯಲ್ಲಿ ರೈತರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.