ಚೆನ್ನೈ: 14 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ದೋಷಿ ತಂದೆಗೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಮಹಿಳಾ ಕೋರ್ಟ್ 43 ವರ್ಷ ಜೈಲು ಶಿಕ್ಷೆ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
2013 ಜುಲೈ ನಲ್ಲಿ ಅರಸಂಕುಡಿ ಗ್ರಾಮದ ಆರೋಪಿ ಕಾಮರಾಜ್ ತನ್ನ ಅಪ್ರಾಪ್ತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೇ ಪತ್ನಿಗೂ ಕೂಡ ಜೀವ ಬೆದರಿಕೆ ಒಡ್ಡಿದ್ದ. ಈ ಎಲ್ಲಾ ಪ್ರಕರಣಗಳ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ನ್ಯಾ. ಜಸಿಂತಾ ಮಾರ್ಟಿನ್ ಕಾಮರಾಜ್‍ಗೆ 43 ವರ್ಷ ಜೈಲು ಶಿಕ್ಷೆ ಮತ್ತು ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ 2015 ಮಾರ್ಚ್ 5ರಂದು ಮಗುವಿಗೆ ಜನ್ಮ ನೀಡಿದ್ದಳು. ಆದರೆ ದುರದೃಷ್ಟವಶಾತ್ ಅದೇ ವರ್ಷ ಸಂತ್ರಸ್ತೆ ಮೃತಪಟ್ಟಿದ್ದಳು. ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿ ಕಾಮರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಆರೋಪಿ ವಿರುದ್ಧ 506 ಅಡಿಯಲ್ಲಿ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿಕೊಂಡಿದ್ದರು. ನ್ಯಾಯಾಧೀಶರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 43 ವರ್ಷ ಶಿಕ್ಷೆ ನೀಡಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ 43 ವರ್ಷ ಜೈಲು ಶಿಕ್ಷೆ, ಹೆಂಡತಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ಪೋಸ್ಕೋ ಕಾಯ್ದೆಯಡಿ 1 ಸಾವಿರ ರೂ. ಮತ್ತು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ 500 ರೂ. ದಂಡ ವಿಧಿಸಲಾಗಿದೆ.
ಪತಿ ಅತ್ಯಾಚಾರ ಎಸಗಿ ಮಗಳು 7 ತಿಂಗಳ ಗರ್ಭಿಣಿ ಆಗಿರುವುದನ್ನು ತಿಳಿದು 2014 ರ ಡಿಸೆಂಬರ್‍ನಲ್ಲಿ ದೂರು ದಾಖಲಿಸಿದ್ದಳು.