ಬೆಳಗಾವಿ: ಕಳ್ಳಬಟ್ಟಿ ಕಳ್ಳರನ್ನು ಹಿಡಿಯಲೆಂದು ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ದಂಧೆಕೋರನೊಬ್ಬ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನಗಾ ಗ್ರಾಮದ ಬಳಿ ನಡೆದಿದೆ.
ಅಡಿವೆಪ್ಪಾ (24) ಮೃತ ದುರ್ದೈವಿ. ಇಂದು ಬೆಳಗಿನ ಜಾವ ಮೂರು ಮಂದಿ ಧಂದೆಕೋರರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೈಕಿನಲ್ಲಿ ಕಳ್ಳಬಟ್ಟಿ ಇಟ್ಟುಕೊಂಡೇ ಅರಿವೆಪ್ಪಾ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಆದರೆ ಪೊಲೀಸರು ಬಿಡದೆ ಚೇಸ್ ಮಾಡಿದ್ದಾರೆ. ಈ ವೇಳೆ ಯುವಕ ಬಾವಿಗೆ ಬಿದ್ದಿದ್ದಾನೆ. ಪರಿಣಾಮ ಬಾವಿಯಲ್ಲೇ ಮೃತಪಟ್ಟಿದ್ದಾನೆ.
ಧಂದೆಕೋರ ಸಾವನ್ನಪ್ಪಿದ್ದಕ್ಕೆ ಸಂಬಂಧಿಕರು ಅಬಕಾರಿ ಪೊಲೀಸರೇ ಹೊಡೆದು ಬಾವಿಗೆ ಹಾಕಿದ್ದಾರೆ ಎಂದು ಆರೋಪಿಸಿ, ಅಬಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಅಬಕಾರಿ ಕಚೇರಿ ಸಹಾಯಕ ಏಕ್‍ನಾಥ್ ಮೇಲೆ ಕಲ್ಲೂ ತೂರಾಟ ಮಾಡಿ ಹಲ್ಲೆ ಮಾಡಿದ್ದು, ಪರಿಣಾಮ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಸದ್ಯಕ್ಕೆ ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಶವಪರಿಕ್ಷೆ ನಡೆಸಲು ಅಡ್ಡಿಯಾಗಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಬಂದು ಧಂದೆಕೋರರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಅಬಕಾರಿ ಕಚೇರಿ ಮತ್ತು ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಮಾರ್ಕೆಟ್ ಪೊಲೀಸರು ಮೃತನ ಸಂಬಂಧಿಕರ ಮೇಲೆ ದೂರನ್ನು ದಾಖಲಿಸಿಕೊಂಡಿದ್ದಾರೆ.