ಇಟಾನಗರ್: ಅರುಣಾಚಲಪ್ರದೇಶದ ಬಾಲಕಿಯರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚುವಂತೆ ಮೂವರು ಶಿಕ್ಷಕರು ಶಿಕ್ಷೆ ನೀಡಿರುವ ಬಗ್ಗೆ ವರದಿಯಾಗಿದೆ.
ನವೆಂಬರ್ 23ರಂದು ಪಾಪುಮ್ ಪರೆ ಜಿಲ್ಲೆಯ ತಾನಿ ಹಪ್ಪಾದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯ ಸುಮಾರು 88 ವಿದ್ಯಾರ್ಥಿನಿಯರಿಗೆ ಈ ರೀತಿ ಅವಮಾನಕರವಾಗಿ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯ ಶಿಕ್ಷಕರ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆದಿದ್ದರಿಂದ ಈ ರೀತಿ ಶಿಕ್ಷಿಸಲಾಗಿದೆ.
ನವೆಂಬರ್ 27ರಂದು ವಿದ್ಯಾರ್ಥಿನಿಯರು ಆಲ್ ಸಗಾಲೀ ಸ್ಟೂಡೆಂಟ್ಸ್ ಯೂನಿಯನ್(ಎಎಸ್‍ಎಸ್‍ಯು) ಮೊರೆ ಹೋಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ದೂರಿನ ಪ್ರಕಾರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆಯಲಾಗಿದ್ದ ಪೇಪರ್ ಸಿಕ್ಕ ನಂತರ ಇಬ್ಬರು ಸಹಾಯಕ ಶಿಕ್ಷಕರು ಹಾಗೂ ಒಬ್ಬರು ಜೂನಿಯರ್ ಶಿಕ್ಷಕರು 88 ವಿದ್ಯಾಥಿಗಳಿಗೆ ಇತರೆ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚುವಂತೆ ಶಿಕ್ಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಎಸ್‍ಎಸ್‍ಯು ಎಫ್‍ಐಆರ್ ದಾಖಲಿಸಿರುವುದನ್ನು ಪಾಪುಮ್ ಪರೇ ಪೊಲೀಸ್ ವರಿಷ್ಠಾಧಿಕಾರಿ ಟಮ್ಮಿ ಆಮೋ ಖಚಿತಪಡಿಸಿದ್ದಾರೆ. ಕೇಸ್ ದಾಖಲಿಸಿಕೊಳ್ಳುವುದಕ್ಕೂ ಮುನ್ನ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಶಿಕ್ಷಕರನ್ನು ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅರುಣಾಚಲಪ್ರದೇಶ ಕಾಂಗ್ರೆಸ್ ಕಮಿಟಿ ಈ ಘಟನೆಯನ್ನು ಖಂಡಿಸಿದ್ದು, ಶಿಕ್ಷಕರ ಈ ರೀತಿಯ ಕೃತ್ಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಮಕ್ಕಳ ಘನತೆಗೆ ಧಕ್ಕೆ ತರುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿಕೆಯಲ್ಲಿ ತಿಳಿಸಿದೆ.