ಹಾವೇರಿ: ಚಿಂದಿ ಆಯುವ ನೆಪದಲ್ಲಿ ರಾತ್ರಿ ಹೊತ್ತು ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚಾಲಾಕಿ ಚೋರಿಯರನ್ನು ಹಾವೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸುಮಾರು 35 ರಿಂದ 38 ವರ್ಷಗಳ ಶಿಲ್ಪಾ ಶಿಕ್ಕಲಿಗಾರ, ರೇಣುಕಾ ಅಲಿಯಾಸ್ ರೇಷ್ಮಾ ಹಾಗೂ ಗಂಗವ್ವ ಬಂಧಿತ ಆರೋಪಿಗಳು. ಆರೋಪಿಗಳಿಂದ 40 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಹುಬ್ಬಳ್ಳಿಯವರು ಆಗಿರುವ ಈ ಚೋರಿಯರು ಕ್ಲಿನಿಂಗ್ ನೆಪದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದರು. ಯಾರಿಗೂ ಅನುಮಾನ ಬರಬಾರದು ಎಂದು ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು.
ಈ ಮೂವರು ದರೋಡೆಕೋರರು ಚಿಂದಿ ಆಯುತ್ತಾ ಬೀಗ ಹಾಕಿದ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇಬ್ಬರು ದರೋಡೆಕೋರರು ಕಾವಲಾಗಿ ನಿಲ್ಲುತ್ತಿದ್ದು, ಮತ್ತೊಬ್ಬಳು ಅಂಗಡಿಯೊಳಗೆ ಹೋಗಿ ಅಲ್ಲಿರುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದಳು.
ದರೋಡೆ ಮಾಡುತ್ತಾ, ಓಡಾಡುತ್ತಿದ್ದ ಇವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.