ಕೃಷ್ಣಮಠಕ್ಕೆ 1 ಬಾರಿಯೂ ಹೋಗಿಲ್ಲ, ಪೇಜಾವರಶ್ರೀಯನ್ನು ಮಾತಾಡ್ಸಿಲ್ಲ- 6ನೇ ಬಾರಿಗೆ ನಾಳೆ ಸಿಎಂ ಉಡುಪಿಗೆ

Public TV
1 Min Read
UDUPI KRISHNA MUTT

ಉಡುಪಿ: ಮುಖ್ಯಮಂತ್ರಿ ಸ್ಥಾನ ಅಲಂಕರಿಸಿಕೊಂಡ ಬಳಿಕ ಸಿಎಂ ಸಿದ್ದರಾಮಯ್ಯ 6ನೇ ಬಾರಿ ಉಡುಪಿಗೆ ಬರ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲ್ಲ ಅನ್ನೋದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ.

ಭಾನುವಾರ ಸಿಎಂ ಮತ್ತೆ ಉಡುಪಿಗೆ ಆಗಮಿಸಲಿದ್ದು, ಸರ್ಕಾರ ಸಹಭಾಗಿತ್ವದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಕೃಷ್ಣ ಮಠದಿಂದ ಈ ಆಸ್ಪತ್ರೆ ಉದ್ಘಾಟನೆ ಆಗುವ ಸ್ಥಳ ಕೇವಲ 200 ಮೀಟರ್ ಅಂತರದಲ್ಲಿದೆ. ಹೀಗಾಗಿ ಊರಿಗೆ ಬಂದವರು ನೀರಿಗೆ ಬರುವುದಿಲ್ಲವೇ ಎಂಬ ಚರ್ಚೆ ವಾಟ್ಸಪ್ ಫೇಸ್‍ಬುಕ್ ಗಳಲ್ಲಿ ಆರಂಭವಾಗಿದೆ.

ಉಡುಪಿ ಶ್ರೀಕೃಷ್ಣಮಠ, ಇಲ್ಲಿರುವ ಆಚಾರ ವಿಚಾರ ಪದ್ಧತಿಗಳ ಬಗ್ಗೆ ಬಹಳ ವಿರೋಧವಿದ್ದ ಕಾಗಿನೆಲೆ ಸ್ವಾಮೀಜಿ ಅವರು ವಾರದ ಹಿಂದೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದರು. ಪೇಜಾವರ ಶ್ರೀಗಳಿಂದ ಸನ್ಮಾನ ಮಾಡಿಸಿ, ಪರ್ಯಾಯ ಪೇಜಾವರಶ್ರೀ ಮತ್ತು ಕಿರಿಯ ಶ್ರೀಗಳಿಗೆ ಕರಿ ಕಂಬಳಿ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ್ದರು.

pejawara shree

ಅದೇ ಕುರುಬ ಸಮುದಾಯದ ಸಿಎಂ ಸಿದ್ದರಾಮಯ್ಯ ಕನಕನಿಗೆ ಒಲಿದ ಕೃಷ್ಣನ ನೋಡಲು ಯಾಕೆ ಉಡುಪಿಗೆ ಬರುತ್ತಿಲ್ಲ ಎಂಬುದು ಚರ್ಚೆಯ ವಿಚಾರ. ಪ್ರತಿ ಬಾರಿ ಉಡುಪಿಗೆ ಬಂದಾಗ ಕೃಷ್ಣ ಮಠಕ್ಕೆ ಹೋಗಲು, ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಕಾಲ ಕೂಡಿ ಬಂದಿಲ್ಲ ಎಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ನುಣುಚಿಕೊಳ್ಳುತ್ತಿದ್ದರು.

ನಾಳೆ ಉಡುಪಿಗೆ ಬರುವ ಸಿಎಂ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಬರ್ತಾರಾ? ಪೇಜಾವರ ಶ್ರೀಗಳನ್ನು ಭೇಟಿ ಮಾಡ್ತಾರಾ? ಎನ್ನುವ ಪ್ರಶ್ನೆ ಈಗ ಮತ್ತೆ ಹುಟ್ಟಿಕೊಂಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರ ನಾಳಿನ ನಡೆಯ ಬಗ್ಗೆ ಕುತೂಹಲವಿದೆ.

ಐದು ಬಾರಿ ಸಿಎಂ ಕಾರ್ಯಕ್ರಮ ಉಡುಪಿಯಲ್ಲಿ ನಿಗದಿಯಾದಾಗ ಮಠದಿಂದ ಆಮಂತ್ರಣ ನೀಡಿದ್ದೆವು. ಬರುತ್ತೇನೆ ಎಂದು ಹೇಳುತ್ತಾರೆ, ಆದ್ರೆ ಬಂದಿಲ್ಲ. ಪರ್ಯಾಯಕ್ಕೂ ಆಹ್ವಾನ ನೀಡಿದ್ದೆವು ಅದಕ್ಕೂ ಬರಲಿಲ್ಲ. ಐದು ಬಾರಿ ಬಾರದಿದ್ದಾಗ ಈ ಬಾರಿ ಆಹ್ವಾನ ನೀಡಿಲ್ಲ. ಬಂದರೆ ಸಂತೋಷ, ಬರದಿದ್ದರೆ ಬೇಸರ ಮಾಡಿಕೊಳ್ಳುವುದಿಲ್ಲ ಅಂತ ಪರ್ಯಾಯ ಮಠ ಹೇಳಿದೆ.

KRISHNA MUTT

Share This Article