ಚಿಕ್ಕಮಗಳೂರು: ಅದು ಸಣ್ಣ ಸರ್ಕಾರಿ ಶಾಲೆ. ಇರೋದು 150 ಮಕ್ಕಳು. ಒಂದೊಂದು ಮಗುನೂ ಸೌಹಾರ್ದತೆಯ ರಾಯಭಾರಿಗಳು. ಜಾತಿ-ಮತ-ಕೋಮು ಭಾವನೆಯನ್ನು ಮೀರಿರೋ ಇಲ್ಲಿನ ಮಕ್ಕಳು, ನಾವೆಲ್ಲಾ ಒಂದೇ ಎಂದು ಕುರಾನ್ ಗೂ ಸೈ, ಭಗವದ್ಗೀತೆಗೂ ಸೈ ಎಂದು ಹೇಳುತ್ತಿದ್ದಾರೆ.
ಸದ್ಯಕ್ಕೆ ಕರ್ನಾಟಕ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಟಿಪ್ಪು ಜಯಂತಿ ಬೇಕು-ಬೇಡದ ಚರ್ಚೆ ಹಿಡಿದಿದೆ. ಆದ್ರೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು ನಾವೆಲ್ಲಾ ಒಂದೇ ಎಂದು ಕೂಗಿ ಹೇಳುತ್ತಿದ್ದಾರೆ. ಅದು ಭಗವದ್ಗೀತೆ, ಕುರಾನ್, ಬೈಬಲ್ ಪಠಿಸುವ ಮೂಲಕ.
ಕ್ರಿಶ್ಚಿಯನ್ ಮಕ್ಕಳು ಬೈಬಲ್ ಹೇಳಿಕೊಟ್ಟರೆ, ಮುಸ್ಲಿಂ ಮಕ್ಕಳು ಕುರಾನ್ ಹೇಳಿಕೊಡುತ್ತಾರೆ ಹಾಗೂ ಹಿಂದೂ ಮಕ್ಕಳು ಭಗವದ್ಗೀತೆ ಕಲಿಸಿಕೊಡುತ್ತಾರೆ. ಹಿಂದೂ-ಮುಸ್ಲಿಂ-ಕ್ರೈಸ್ತ ಮಕ್ಕಳೆಲ್ಲಾ ನಾವೆಲ್ಲಾ ಒಂದೇ ಎಂದು ಸೌಹಾರ್ದಯುತವಾಗಿ ಬೆಳೆಯುತ್ತಿದ್ದಾರೆ.
ಎರಡೂವರೆ ವರ್ಷಗಳಿಂದ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಬೆಂಗಾವಲಾಗಿ ನಿಂತಿದ್ದಾರೆ. ಮಕ್ಕಳಿಗೆ ಕಷ್ಟವಾಗುವಂತಹ, ಅರ್ಥೈಸಿಕೊಳ್ಳಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಶಿಕ್ಷಕರು ತಿಳಿ ಹೇಳುತ್ತಾರೆ. ವಾರದಲ್ಲಿ ಮೂರು ದಿನ ಮೂರು ಪಿರಿಯಡ್ ಗಳು ಸೌಹಾರ್ದತೆಯ ಸಂದೇಶಕ್ಕೆ ಮೀಸಲಾಗಿದೆ. ಶಿಕ್ಷಕರ ಜೊತೆ ಪೋಷಕರು ಕೂಡ ಮಕ್ಕಳ ಕಲಿಕೆಗೆ ಬೆಂಗಾವಲಾಗಿದ್ದಾರೆ.