ಬೆಂಗಳೂರು: ಚಲಿಸುತ್ತಿದ್ದ ಬೈಕ್ ಗೆ ಅಡಿಕೆ ತುಂಬಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ನರಳಿ ನರಳಿ ಸಾವನಪ್ಪಿರುವ ಘಟನೆ ನೆಲಮಂಗಲದ ತಾಳೆಕೆರೆ ಗೇಟ್ ಬಳಿ ನಡೆದಿದೆ.
ನೆಲಮಂಗಲ ಪಟ್ಟಣದ ನಿವಾಸಿ ಕಾಂತರಾಜು ತುಮಕೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಯಮಸ್ವರೂಪಿಯಾಗಿ ಬಂದ ಟ್ರ್ಯಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂತರಾಜು ಕೆಲ ಕಾಲ ನರಳಾಡಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಂದರೂ ಯಾವುದೇ ಪ್ರಯೋಜನವಾಗದೆ ಕಾಂತರಾಜು ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಸಂಚಾರಿ ಪೊಲೀಸರು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರಾಕ್ಟರ್ ಚಾಲಕನನ್ನು ಪತ್ತೆಗೆ ಶೋಧಕಾರ್ಯ ಆರಂಭಿಸಿದ್ದಾರೆ.