ರಾಯಚೂರು: ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸೋದು ಅಷ್ಟರಲ್ಲೇ ಇದೆ. ಆದರೆ ಹಾಗೂ ಹೀಗೂ ಕೊಡುವ ಪರಿಹಾರವೂ ಕೂಡ ರೈತರಿಗೆ ತಲುಪುತ್ತಿಲ್ಲ. ಒಂದೆಡೆ ಅಧಿಕಾರಿಗಳು ವಿಲನ್ ಆದರೆ ಮತ್ತೊಂದೆಡೆ ಪರಿಹಾರದ ಮೊತ್ತದಲ್ಲೂ ರಾಜಕೀಯ ಆರೋಪ ಕೇಳಿ ಬಂದಿದೆ.
ರಾಯಚೂರು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ನಿಸಹಾಯಕತೆಯ ಮಾತುಗಳಿವು. ಇಲ್ಲಿ ಶಾಸಕರ ಹೆಸರನ್ನು ಶಿವರಾಜ್ ಎಂದು ಬದಲಾಯಿಸಿ 32 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ. ಶಾಸಕರನ್ನೇ ಶಿವರಾಜ್ ಮಾಡಿ ಜಮೀನಿನ ಮೇಲೆ ದುಡ್ಡು ಹೊಡೆದ ಅಧಿಕಾರಿಗಳ ಕಥೆ ಇಲ್ಲಿಗೆ ನಿಲ್ಲುವುದಿಲ್ಲ.
110 ರೈತರಿಗೆ ಬೆಳೆ ಹಾನಿ ಪರಿಹಾರ ಬಂದರೆ 10 ಜನರಿಗೆ ಮಾತ್ರ ಪರಿಹಾರ ವಿತರಣೆ ಆಗುತ್ತಂತೆ. ಉಳಿದ ಹಣವನ್ನು ಅಧಿಕಾರಿಗಳೇ ಹಂಚಿಕೊಳ್ಳುತ್ತಾರೆ. ಇದು ಇಂದು ನಿನ್ನೆಯ ಮಾತಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವುದೇ ಹೀಗೆ ಎಂದು ಶಾಸಕರೇ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆ ಮೂಲಕ ಲಂಚ ಕೊಟ್ಟರೆ ಮಾತ್ರ ಪರಿಹಾರ ಎಂಬ ಸ್ಥಿತಿ ರಾಯಚೂರಿನಲ್ಲಿದೆ ಎನ್ನುವುದು ನಿಜವಾಗಿದೆ.
ರಾಯಚೂರಿನಲ್ಲಿ ಬೆಳೆ ಪರಿಹಾರದ ಹಣವನ್ನು ಅಧಿಕಾರಿಗಳು ನುಂಗಿದರೆ, ಇತ್ತ ದಾವಣಗೆರೆಯಲ್ಲಿ ಪರಿಹಾರದ ಮೊತ್ತ ವಿತರಣೆಯಲ್ಲಿ ರಾಜಕೀಯ ಮೇಲಾಟ ನಡೆದಿದೆಯಂತೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಪ್ರ್ರಭಾವ ಬೀರಿ ತಮಗೆ ಬೇಕಾದವರಿಗೆ ಹೆಚ್ಚು ಪರಿಹಾರ, ಉಳಿದವರಿಗೆ ಕನಿಷ್ಟ ಪರಿಹಾರ ಮೊತ್ತ ವಿತರಿಸುತ್ತಿದ್ದಾರೆ ಎಂದು ಕೆಲ ಸಂತ್ರಸ್ಥರು ಆರೋಪಿಸುತ್ತಿದ್ದಾರೆ.
ಮಳೆ ಬಂದರೂ ಕಷ್ಟ, ಬಾರದಿದ್ದರೂ ನಷ್ಟ. ಪರಿಹಾರ ಕೊಟ್ಟರು ಅದು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎನ್ನುವುದೇ ಡೌಟ್. ಏನೇ ಆದರೂ ಯಾವ ಸರ್ಕಾರ ಇದ್ದರೂ ನಮ್ಮ ಅನ್ನದಾತರ ಸ್ಥಿತಿ ಮಾತ್ರ ಸುಧಾರಿಸುವ ಲಕ್ಷಣವೇ ಕಾಣಿಸುತ್ತಿಲ್ಲ.