ಚಿಕ್ಕಮಗಳೂರು: ಕಳೆದ ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಹಾಸ್ಯ ನಟ ಕೋಮಲ್ ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಪಘಾತಕ್ಕೆ ತುತ್ತಾದ ಪ್ರಕಾರಣ ಹಸಿಯಾಗಿರುವಾಗಲೇ ಈಗ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಇದೇ ರೀತಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೊಸಬರ ಕಿಶೋರ್ ಸಿ ನಾಯ್ಕ್ ಸಾರಥ್ಯದ `ಐಸ್ ಮಹಲ್’ ಚಿತ್ರದ ಶೂಟಿಂಗ್ ವೇಳೆ ಅವಘಡವೂಂದು ಸಂಭವಿಸಿದೆ. ಚಿಕ್ಕಮಗಳೂರು ಕಡೂರು ತಾಲುಕಿನ ಹೋಗೆರೆ ಹಳ್ಳಿಯಲ್ಲಿ ಚಿತ್ರದ ಶೂಟಿಂಗ್ ನಡೆಯುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಚಿತ್ರದ ಹೀರೋ ಕೀರ್ತಿ ಭಟ್ ರವರ ಇಂಟ್ರೊಡಕ್ಷನ್ ಸೀನ್ ಶೂಟ್ ನಡೆಯುವಾಗ ಡೂಪ್ ಹಾಕಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ, ಡೂಪ್ ಕಲಾವಿದರ ತಲೆಗೆ ಗಾಯವಾಗಿದೆ.
ಈ ಹಿಂದೆ ಕನ್ನಡದ ಕೆಂಪೇಗೌಡ-2 ಸಿನಿಮಾದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದ್ದು, ನಟರಾದ ಲೂಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿದ್ದರು. ಅದೃಷ್ಟವಶಾತ್ ಇಬ್ಬರೂ ನಟರು ಪ್ರಾಣಾಪಾಯದಿಂದ ಪಾರಾಗಿದ್ದರು. ತಮಿಳುನಾಡಿನ ಮಹಾಬಲಿಪುರಂ ಬಳಿ ಕೆಂಪೇಗೌಡ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ಅಲ್ಬೇರಿಯನ್ ಬೈಕ್ ಬಳಸಿಕೊಳ್ಳುತ್ತಿದ್ದರು. ಈ ವೇಳೆ ಕೆಳಮಟ್ಟದಿಂದ ಬೈಕ್ ವೀಲಿಂಗ್ ಮಾಡುವಾಗ ವಾಹನ ಉಲ್ಟಾ ಬಿದ್ದು ಯೋಗಿ ಹಾಗೂ ಕೋಮಲ್ ಅವರು ಗಾಯಗೊಂಡಿದ್ದರು.
`ಗೋದ್ರಾ’ ಸಿನಿಮಾದ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ನಟ ನೀನಾಸಂ ಸತೀಶ್ ಗಾಯಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಸಾಹಸ ಮಾಡಲು ಹೋಗಿ ಅನಾಹುತ ಸಂಭವಿಸಿತ್ತು. ಬಾಂಬ್ ಬ್ಲಾಸ್ಟ್ ಸೀನ್ ನಡೆಯುತ್ತಿದ್ದಾಗ ನಿನಾಸಂ ಸತೀಶ್ ಪಕ್ಕೆಲುಬಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.