ವಿಜಯಪುರ : ಜಿಲ್ಲೆಯ ಮಹಿಳೆಯೊಬ್ಬರು ಸರ್ಕಾರದ ಆರೋಗ್ಯ ಕವಚ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ತೊದಲಬಾಗಿ ಗ್ರಾಮದವರಾದ ನಿರ್ಮಲಾ ಎಂಬವರೇ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ನಿರ್ಮಲಾ ಅವರಿಗೆ ಶುಕ್ರವಾರ ಸಂಜೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿತ್ತು. ತಕ್ಷಣ ವಿಜಯಪುರ ತಾಲೂಕಿನ ಬಬಲೇಶ್ವರದ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿ ಹೆರಿಗೆಗಾಗಿ ಆಸ್ಪತ್ರೆಗೆ ಕರೆದ್ಯೊಯುವ ಪ್ರಯತ್ನ ನಡೆಸಲಾಗಿತ್ತು.
ಆದರೆ ಬಾಗಲಕೋಟೆಯ ಕುಂಬಾರಹಳ್ಳ ಬಳಿಗೆ ತೆರಳುವ ವೇಳೆಗೆ ನಿರ್ಮಲಾ ಅವರಿಗೆ ಹೆರಿಗೆ ನೋವು ತೀವ್ರವಾಗಿದೆ. ಅದ್ದರಿಂದ ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಯಾದ ಇಟಿಎಂ ವಿಶ್ವನಾಥ, ಚಾಲಕ ಸಂಜು ಹಾಗೂ ಆಶಾ ಕಾರ್ಯಕರ್ತೆ ಕುಸುಮಾ ಅವರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ನಂತರ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಂಬುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿಗೆ ನಿರ್ಮಲಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.