ಶಿವಮೊಗ್ಗ: ಪುಟ್ಟ ಮಕ್ಕಳನ್ನು ಪುಸಲಾಯಿಸಿ ಮನೆಗೆ ಕರೆದು ಅವರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ವ್ಯಕ್ತಿಗೆ, ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮಂಜಪ್ಪ ಥಳಿತಕ್ಕೆ ಒಳಗಾದ ವ್ಯಕ್ತಿ. ಮಂಜಪ್ಪ ಮೂಲತಃ ಶಿಕಾರಿಪುರ ತಾಲೂಕಿನವನು. ಈತ ಕೂಲಿ ಕೆಲಸ ಮಾಡಲು ಶಿವಮೊಗ್ಗಕ್ಕೆ ಆರು ತಿಂಗಳ ಹಿಂದೆ ಬಂದು ಶರಾವತಿ ನಗರದ ಚಾನಲ್ ಏರಿಯಾದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ.
ಈತ ಅಕ್ಕಪಕ್ಕದ ಮನೆಗಳ ಬಾಲಕಿಯರನ್ನು ಮನೆಗೆ ಕರೆದು ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ತಿಳಿದು ನೆರೆಹೊರೆಯವರು ಈತನಿಗೆ ಎಚ್ಚರಿಕೆಯನ್ನು ನೀಡಿದ್ದರೂ ತನ್ನ ಚಾಳಿ ಬಿಟ್ಟಿರಲಿಲ್ಲ.
ಶುಕ್ರವಾರ ರಾತ್ರಿ ಇಂಥದೇ ಕೃತ್ಯವೆಸಗಿದಾಗ ರೊಚ್ಚಿಗೆದ್ದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.