– ಪ್ರಧಾನಿಗೆ ಪತ್ರ ಬರೆದ್ರೂ ಪ್ರಯೋಜನವಾಗಿಲ್ಲ
ಯಾದಗಿರಿ: ಕೇಂದ್ರ ಸರ್ಕಾರ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‍ಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಆಧಾರ್ ಕಾರ್ಡ್ ಪಡೆಯಲು ಹೆಸರು ನೋಂದಾಯಿಸಿ 7 ವರ್ಷ ಕಳೆದ್ರೂ ಇನ್ನೂ ಸಿಕ್ಕಿಲ್ಲ. ಪರಿಣಾಮ ಉದ್ಯೋಗದಿಂದ ವಂಚಿತರಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ್ರೂ ಪ್ರಯೋಜನವಾಗಿಲ್ಲ.
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ನಿವಾಸಿ ಮಲ್ಲಿಕಾರ್ಜುನ ಗುರಿಕಾರ, 2011ರಲ್ಲಿ ಕುಟುಂಬ ಸಮೇತರಾಗಿ ಆಧಾರ್ ಕಾರ್ಡ್‍ಗೆ ಹೆಸರು ನೋಂದಾಯಿಸಿದ್ರು. ಇವರ ಕುಟುಂಬ ಸದಸ್ಯರಿಗೆಲ್ಲಾ ಆಧಾರ್ ಕಾರ್ಡ್ ಬಂತು. ಆದ್ರೆ ಇವರಿಗೆ ಆಧಾರ್ ಸಿಕ್ಕಿಲ್ಲ. ಈ ಬಗ್ಗೆ ವಿಚಾರಿಸಿದ್ರೆ ಡಾಟಾ ಎರರ್ ಬಂದಿದೆ ಅಂತ ಕಚೇರಿಯಿಂದ ಕಚೇರಿಗಳಿಗೆ ಅಲೆದಾಡಿಸ್ತಿದ್ದಾರೆ.
ಯಾದಗಿರಿಯಿಂದ ಬೆಂಗಳೂರಿನ ಹೆಡ್ ಆಫಿಸ್‍ಗೆ ಬಂದ್ರೂ, ದೆಹಲಿ ಅಧಿಕಾರಿಗಳಿಗೂ ಮೇಲ್ ಮಾಡಿದ್ರೂ ಆಧಾರ್ ಸಿಕ್ಕಿಲ್ಲ. ಕೊನೆಗೆ ಆಗಸ್ಟ್ 28 ರಂದು ಪ್ರಧಾನಮಂತ್ರಿ ಸಂಪರ್ಕದ ಮೇಲ್ ಐಡಿಗೆ ಪತ್ರ ಹಾಕಿದ್ರು. ಅಲ್ಲಿಂದ ಸೆಪ್ಟೆಂಬರ್ 1ರಂದು ಉತ್ತರ ಬಂತು. ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೀವಿ. ಆಧಾರ್ ಸಿಗುತ್ತೆ ಅಂದಿದ್ರು. ಆದ್ರೆ ಇನ್ನೂ ಆಧಾರ್ ಕಾರ್ಡ್ ಮಲ್ಲಿಕಾರ್ಜುನ್ ಕೈಸೇರಿಲ್ಲ.
ಇಷ್ಟಾದ್ರೂ ಸುಮ್ಮನಾಗದ ಮಲ್ಲಿಕಾರ್ಜುನ್ ಮಾಹಿತಿ ಹಕ್ಕು ಅಡಿ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಅರ್ಜಿ ಹಾಕಿದ್ರು. ಇದಕ್ಕೆ ಆರ್‍ಟಿಐ ಅಡಿ ಉತ್ತರ ನೀಡಿದ ಅಧಿಕಾರಿಗಳು ನಿಮ್ಮ ಹೆಬ್ಬೆಟ್ಟು 7 ಜನರ ಜೊತೆ ಮಿಕ್ಸ್ ಆಗಿದೆ. ಅಪಡೇಟ್ ಆಗಬೇಕು ಎಂದಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಛಲಗಾರ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಕಡುಬಡತನದಲ್ಲೂ ಬಿ.ಎಸ್‍ಸಿ, ಬಿ.ಎಎಡ್ ಮಾಡಿ ಎಂ.ಎಸ್‍ಸಿ ವ್ಯಾಸಂಗ ಮಾಡ್ತಿರೋ ಇವರು ಯಾರದ್ದೋ ತಪ್ಪಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ರೂ ಛಲ ಬಿಡದೆ ರಾಷ್ಟ್ರಪತಿ ಅವರಿಗೂ ಪತ್ರ ಬರೀತೀನಿ ಅಂತಿದ್ದಾರೆ.