ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದು ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬೆ ದೇವಾಲಯದಲ್ಲಿ ಇಂದು ಮಾತನಾಡಿದ ಬ್ರಹ್ಮಾಂಡ ಗುರೂಜಿ, ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂದ್ರು.
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ತೆರೆಯಲಾಗುತ್ತದೆ. ಆಧಿದೇವತೆ ಹಾಸನಾಂಬೆ ದರ್ಶನಾರಂಭಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಿಂದೂ ಪಂಚಾಂಗದ ಆಶ್ವೀಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಮೈಸೂರು ತಳವಾರ ವಂಶಸ್ತ ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಗುವುದು.
ಇಂದು ಮಧ್ಯಾಹ್ನ 12:30ಕ್ಕೆ ಅರ್ಧ ನಕ್ಷತ್ರ ಸಮಯದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲು ಸಕಲ ಸಿದ್ಧತೆ ಮಾಡಲಾಗಿದೆ. ಕನಿಷ್ಟ 9 ದಿನ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಪಂಚಾಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೇ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದ್ದು, ಲಕ್ಷಾಂತರ ಮಂದಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಈ ಬಾರಿ ಕೇವಲ 8 ದಿನವಷ್ಟೇ ದರ್ಶನಕ್ಕೆ ಅವಕಾಶವಿದ್ದು, 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.