ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

Public TV
3 Min Read
BJ Puttaswamy and siddaramaiah

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೊಂದು ಅಕ್ರಮ ಡಿನೋಟಿಫಿಕೇಶನ್ ಚಾರ್ಜ್ ಶೀಟ್  ಬಿಡುಗಡೆ ಮಾಡಿದೆ. ಸಿಎಂ ಆಪ್ತನ ಕಾರಣಕ್ಕಾಗಿ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ 300 ಕೋಟಿ ಬೆಲೆಬಾಳುವ 6.26 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಕಚೇರಿಯಲ್ಲಿ ಮೂವರು ಶಾಸಕರ ಜತೆ ಸುದ್ದಿಗೋಷ್ಠಿ ನಡೆಸಿದ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ್ರು. ಬೆಂಗಳೂರಿನ ಉತ್ತರ ವಲಯದ ಭೂಪಸಂದ್ರದ ಸರ್ವೆ ನಂ. 20 ಹಾಗೂ 21ರಲ್ಲಿ ಒಟ್ಟು 6.26 ಎಕರೆ ಭೂಮಿಯನ್ನ ಅಕ್ರಮವಾಗಿ ಡಿನೋಟಿಫಿಫೈ ಮಾಡಿದ್ದಾರೆ, ಡಿನೋಟಿಫೈ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದಾರೆ, ಮುಖ್ಯಮಂತ್ರಿಗಳೇ ಇದಕ್ಕೆ ನೇರ ಹೊಣೆ ಅಂತಾ ಆರೋಪಿಸಿದ್ದಾರೆ.

ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಅವರ ಡಿನೋಟಿಫೈ ಮಾಡುವಂತೆ ಮನವಿ ಮಾಡಿರುವ ಪತ್ರದ ಮೇಲೆ ಪರಿಶೀಲಿಸಿ ಕೂಡಲೇ ಚರ್ಚಿಸಿ ಅಂತಾ ಬರೆದು ಸಿಎಂ ಸಿದ್ದರಾಮಯ್ಯ ಸಹಿ ಹಾಕಿರುವ ಪತ್ರವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಆದ್ರೆ ಡಿನೋಟಿಫೈ ಮಾಡಿರುವ ಅಗತ್ಯ ದಾಖಲೆಯ ಮಾತ್ರ ರಿಲೀಸ್ ಆಗಿಲ್ಲದಿರೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

bjp pressmeet

ಬಿಜೆಪಿ ಆರೋಪಗಳೇನು?
1988ರಲ್ಲಿ ರಾಜಮಹಲ್ ವಿಲಾಸ್ 2ನೇ ಹಂತದ ಬಡಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದ ಸ.ನಂ20ರಲ್ಲಿ 3.34 ಎಕರೆ, ಸ.ನಂ.21ರಲ್ಲಿ 2.32 ಎಕರೆ ನೋಟಿಫಿಕೇಶನ್ ಆಗಿತ್ತು. ಬಡಾವಣೆ ನಿರ್ಮಿಸಿ 22 ಮಂದಿಗೆ ಬಿಡಿಎ ಸೈಟ್ ಹಂಚಿಕೆ ಮಾಡಿತ್ತು. ಆದರೆ 1992ರಲ್ಲಿ ಅಂದಿನ ಸರ್ಕಾರ 6.26ಎಕರೆ ಭೂಮಿ ಡಿನೋಟಿಫಿಕೇಶನ್ ಮಾಡಿತ್ತು. ಈ ವೇಳೆ ಬಿಡಿಎಯಿಂದ ಜಾಗ ಪಡೆದವರು ಡಿನೋಟಿಫಿಕೇಶನ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. 1996ರಲ್ಲಿ ಹೈಕೋರ್ಟ್ ಡಿನೋಟಿಫಿಕೇಶನ್ ರದ್ದು ಮಾಡಿತ್ತು. ಆದರೆ ಮೂಲ ಮಾಲೀಕರಲ್ಲಿ ಒಬ್ಬರಾದ ಸೈಯದ್ ಬಾಷಿದ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡುತ್ತಾರೆ. ಅಲ್ಲೂ ಸೈಯದ್ ಬಾಷಿದ್ ಅರ್ಜಿ ತಿರಸ್ಕೃತವಾಗುತ್ತದೆ. ನಂತರ ಸುಪ್ರೀಂ ಕೋರ್ಟ್ ಮೊರೆ ಹೋದ್ರೂ ಅಲ್ಲೂ ಅರ್ಜಿ ವಜಾಗೊಳ್ಳುತ್ತದೆ.

2015ರಲ್ಲಿ ಮತ್ತೊಬ್ಬ ಮೂಲ ಮಾಲೀಕರಾದ ಕೆ.ವಿ.ಜಯಲಕ್ಷ್ಮಮ್ಮ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಆದ್ರೆ ಹೈಕೋರ್ಟ್ ನಲ್ಲಿ ಜಯಲಕ್ಷ್ಮಮ್ಮ ಮನವಿ ಪುರಸ್ಕಾರವಾಗಿ ಡಿನೋಟಿಫಿಕೇಶನ್ ಯಥಾಸ್ಥಿತಿಗೆ ಆದೇಶ ನೀಡುತ್ತದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದ್ರೆ ಮೇಲ್ಮನವಿಗೆ ಬಿಡಿಎ ಅರ್ಜಿ ಯೋಗ್ಯವಲ್ಲ ಎಂದು ಸರ್ಕಾರದ ಕಾನೂನು ಕೋಶ ಅಭಿಪ್ರಾಯ ವ್ಯಕ್ತಪಡಿಸುತ್ತದೆ. 2016ರ ಜೂನ್ 7 ರಂದು ಬಿಡಿಎ ಮನವಿ ಮೇರೆಗೆ ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ರದ್ದುಗೊಳಿಸುತ್ತದೆ. ಆ ಬಳಿಕ 15-06-2016ರಂದು ಬಿಡಿಎ ಆಯುಕ್ತರು ಭೂ ಸ್ವಾಧೀನ ಪ್ರಕ್ರಿಯೆ ರದ್ದಾಗಿರುತ್ತದೆ ಎಂದು ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರಿಗೆ ಹಿಂಬರಹ ನೀಡುತ್ತಾರೆ.

ಈ ಆಸ್ತಿಯ ಇಂದಿನ ಮಾರುಕಟ್ಟೆ ಬೆಲೆ 300 ಕೋಟಿ ರೂ. ಆಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಳಿಸಿಕೊಂಡ ಆಸ್ತಿಯನ್ನು ಬಿಟ್ಟುಕೊಟ್ಟಿರುವುದರಲ್ಲಿ ಸರ್ಕಾರದ ನೇರ ಕೈವಾಡವಿದೆ. 37 ವರ್ಷದಿಂದ ಈ ವ್ಯವಹಾರದಲ್ಲಿ ಕಾಣಸಿದೇ ಇದ್ದ ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರು ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಂತರ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು ಅನುಮಾನಕ್ಕೆ ಬರುತ್ತದೆ. ಜನತಾದಳದಲ್ಲಿ ಸಿದ್ದರಾಮಯ್ಯ ಜೊತೆಯಲ್ಲಿ ಆಪ್ತರಾಗಿದ್ದ ಪ್ರಬಲ ರಾಜಕಾರಣಿ ಜಯಲಕ್ಷ್ಮಮ್ಮ ರಿಂದ ಪವರ್ ಆಫ್ ಅಟಾರ್ನಿ ಪಡೆದು ಈ ಅವ್ಯವಹಾರದಲ್ಲಿ ಸಕ್ರಿಯರಾಗಿದ್ದರಿಂದಲೇ ಸರ್ಕಾರ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಆದೇಶ ನೀಡಿದೆ. ಈ ಆರೋಪ ತಿರಸ್ಕರಿಸುವುದಾದರೆ ಸಿಎಂ ಸಿದ್ದರಾಮಯ್ಯ ಒಂದು ವಾರದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಈ ಆರೋಪ ಸತ್ಯವಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಬ್ರಹ್ಮಾಂಡ ಭ್ರಷ್ಟಾಚಾರ: ಭೂಪಸಂದ್ರ ಡಿನೋಟಿಫಿಕೇಷನ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಸಿಎಂ ಬೇನಾಮಿ ಆಸ್ತಿ ಮಾಡಲು ಹೊರಟಿದ್ದಾರೆ, ಸಿಎಂ ವಿರುದ್ಧ ಬುಧವಾರ ಅಥವಾ ಗುರುವಾರ ಎಸಿಬಿ ಗೆ ದೂರು ಕೊಡುತ್ತೇವೆ. ಬಿಡಿಎ ಇದ್ದಿದ್ದು ಹಣ ಮಾಡೋಕಾ, ಮುಚ್ಚಿಬಿಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ ಎಂದು ಸಿಎಂ ವಿರುದ್ಧ ಕೆಂಡಕಾರಿದ್ದಾರೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುವ ಸಿಎಂ ಹೇಳಿಕೆಗೆ ಸವಾಲು ಹಾಕಿರುವ ಪುಟ್ಟಸ್ವಾಮಿ, ನಾಳೆನೇ ನನ್ನ ಮೇಲೆ ಮೊಕದ್ದಮೆ ಹೂಡಲಿ, ಇನ್ನಷ್ಟು ವಿಚಾರ ಹೊರತೆಗೆಯುತ್ತೇನೆ, ಮಾನನಷ್ಟ ಮೊಕದ್ದಮೆ ಹೂಡಿದರೆ ಎದುರಿಸಲು ಸಿದ್ಧ ಅಂತಾ ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *