ಚಿಕ್ಕಬಳ್ಳಾಪುರ: ನೀರಿನ ಸಂಪು ಕ್ಲೀನಿಂಗ್ ಮಾಡಲು ಹೋಗಿ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೇಕಲಹಳ್ಳಿ ಗ್ರಾಮದ ಪೆದ್ದನ್ನ, ನಾರಾಯಣಪ್ಪ ಸ್ವಾಮಿ ಹಾಗೂ ದಿನ್ನೇನಹಳ್ಳಿ ಗ್ರಾಮದ ರೆಡ್ಡಪ್ಪ ಮೃತಪಟ್ಟಿರುವ ದುರ್ದೈವಿಗಳು. ಜನಾರ್ದನ ಎಂಬವರ ಸ್ಥಿತಿ ಗಂಭೀರವಾಗಿದ್ದು, ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರ ತೋಟದ ಮನೆಯ ಬಳಿ ಇರುವ ನೀರಿನ ಸಂಪು ಕ್ಲೀನಿಂಗ್ ಮಾಡಲು ಈ ನಾಲ್ವರು ಒಳಗಿಳಿದಿದ್ದಾರೆ. ಆದರೆ ಸಂಪ್‍ನೊಳಗೆ ಮೂವರು ಸಾವನ್ನಪ್ಪಿದ್ದು, ಜನಾರ್ದನ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಸಂಪ್ ಮೇಲ್ಛಾವಣಿ ಕಿತ್ತು ಹಾಕಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಉಸಿರುಗಟ್ಟಿ ಅಥವಾ ವಿದ್ಯುತ್ ಶಾಕ್ ನಿಂದ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಮರಣೋತ್ತರ ವರದಿ ಬಂದ ಮೇಲೆ ಖಚಿತವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಇನ್ನೂ ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ರಾಮಕೃಷ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.