ದಾವಣಗೆರೆ: ಕಳೆದ ರಾತ್ರಿ ಮತ್ತೆ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲಾಸ್ಪತ್ರೆಯ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿದ ನೀರನ್ನು ಹೊರಹಾಕಿದ ಘಟನೆ ದಾವಣಗೆರೆಯಲ್ಲಿ ಕಂಡುಬಂದಿದೆ.
ನಗರದ ಜಿಲ್ಲಾ ಆಸ್ಪತ್ರೆಗೆ ನೀರು ನುಗ್ಗಿದ ಪರಿಣಾಮ ರೋಗಿಗಳು ಪರದಾಡುವಂತಾಗಿತ್ತು. ಅಷ್ಟೇ ಅಲ್ಲದೆ ಆಸ್ಪತ್ರೆಗೆ ನುಗ್ಗಿದ ನೀರನ್ನು ರೋಗಿಗಳ ಸಂಬಂಧಿಕರೇ ಹೊರಹಾಕಿದರು. ಆಸ್ಪತ್ರೆಯಲ್ಲಿ ಇಷ್ಟೊಂದು ಅವಾಂತರ ಸಂಭವಿಸಿದರೂ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾತ್ರ ಮನೆಯಲ್ಲಿದ್ದರು. ವಿಧಿಯಿಲ್ಲದೆ ನೀರನ್ನು ಹೊರಹಾಕುತ್ತಾ ಅಧಿಕಾರಿಗಳಿಗೆ ರೋಗಿಗಳ ಸಂಬಂಧಿಕರು ಹಿಡಿ ಶಾಪ ಹಾಕಿದರು.
ಇನ್ನು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವೂ ಸಂಪೂರ್ಣ ಜಲಾವೃತಗೊಂಡು ಕೆರೆಯಂತೆ ಕಾಣುತಿತ್ತು. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿ ರಾತ್ರಿಯೆಲ್ಲಾ ಜನರು ಜಾಗರಣೆ ಮಾಡಿದ್ರು.
ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ರಸ್ತೆ ಕಾಣದೇ ಕಾರೊಂದು ಚರಂಡಿಯಲ್ಲಿ ಸಿಲುಕಿಕೊಂಡ ದೃಶ್ಯ ಕಂಡುಬಂತು.