ಧಾರವಾಡ: 86 ವರ್ಷದ ಅಜ್ಜಿ ಸಾವಮ್ಮ ಕಳೆದ 30 ವರ್ಷಗಳಿಂದ ಉಚಿತವಾಗಿ ತಮ್ಮೂರು ಜಿರ್ಗವಾಡದ ಶಾಲೆಯ ಶಿಕ್ಷಕರಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕಬೆಳ್ಳಿಕಟ್ಟಿಯವರಾದ ಸಾವಮ್ಮ ಮದುವೆಯಾದ ಮೇಲೆ ಧಾರವಾಡ ತಾಲೂಕಿನ ಜಿರ್ಗವಾಡ ಗ್ರಾಮಕ್ಕೆ ಬಂದಿದ್ದಾರೆ. ಸದ್ಯ 86 ವರ್ಷ ವಯಸ್ಸಾದರೂ ಉತ್ಸಾಹ ಕಡಿಮೆಯಾಗಿಲ್ಲ. ಶಿಕ್ಷಕರು ಅಂದರೆ ಬಹುವಾಗಿ ಗೌರವಿಸುವ ಸಾವಮ್ಮಜ್ಜಿ ಮೊದಲಿಗೆ ಈ ಶಾಲೆಯ ಶಿಕ್ಷಕರಿಗೆ ಊಟ ಕಳಿಸಿಯೇ ಮುಂದಿನ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಾವೇ ಶಾಲೆಗೆ ಹೋಗಿ ಶಿಕ್ಷಕರಿಗೆ ಊಟ ಬಡಿಸಿ ಬರುತ್ತಾರೆ.
ಶಿಕ್ಷಕರು ಎಂದರೆ ಮಕ್ಕಳು ಎನ್ನುವ ಅಜ್ಜಿ, ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಮೊದಲ ಬೆಳೆಯನ್ನ ಶಿಕ್ಷಕರಿಗೆ ನೀಡುತ್ತಾರೆ. ಅಜ್ಜಿ ಬಗ್ಗೆ ಶಾಲೆಯ ಶಿಕ್ಷಕರಿಗೂ ಅಷ್ಟೇ ಗೌರವ. ಮನೆಯಿಂದ ಊಟ ತಂದರೂ ಅಜ್ಜಿಯ ಕೈತುತ್ತು ತಿಂದರೆ ಸಮಾಧಾನ. ಅಜ್ಜಿ ನಿಜಕ್ಕೂ ಅನ್ನಪೂರ್ಣೇಶ್ವರಿ ಅಂತ ಶಾಲೆಯ ಶಿಕ್ಷಕರು ಹೊಗಳುತ್ತಾರೆ.
ಅಜ್ಜಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ನಿಧನರಾಗಿದ್ದಾರೆ. ಮತ್ತೊಬ್ಬ ಮಗ ಕೃಷಿಕರಾಗಿದ್ದಾರೆ. ಮನೆಯಲ್ಲಿ ಪ್ರತಿ ದಿನ ಶಿಕ್ಷಕರಿಗೆ ಅಡುಗೆ ಮಾಡುವ ಸೊಸೆಯಂದಿರೂ ಕೂಡಾ ಯಾವತ್ತೂ ಊಟ ಕಳಿಸೋಕೆ ಬೇಸರ ಮಾಡಿಕೊಂಡಿಲ್ಲ.