ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ

Public TV
2 Min Read
rane X CM

ಮುಂಬೈ: ರಾಜ್ಯದ ಮಾಜಿ ಸಿಎಂ ನಾರಾಯಣ ರಾಣೆ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‍ನೊಂದಿಗೆ ಹೊಂದಿದ ಬಹುಕಾಲದ ಬಾಂಧವ್ಯವನ್ನು ಕೊನೆಗೊಳಿಸಿದ್ದಾರೆ.

ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದ್ದು, ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂದು ಹೈಕಮಾಂಡ್ ಈ ಹಿಂದೆ ಮಾತು ಕೊಟ್ಟಿತ್ತು. ಆದರೆ ಪಕ್ಷ ತನಗೆ ಅನ್ಯಾಯವನ್ನು ಮಾಡುತ್ತಿದ್ದು, ನನ್ನ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಅದರಿಂದಲೇ ತಾನು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ರಾಣೆ ತಿಳಿಸಿದ್ದಾರೆ.

2005ರಲ್ಲಿ ನಾನು ಶಿವಸೇನೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆ ಆರು ತಿಂಗಳಿನಲ್ಲಿ ಸಿಎಂ ಮಾಡುವುದಾಗಿ ಆಶ್ವಾಸನೆಯನ್ನು ನೀಡಿದ್ದರು. ಆದರೆ 12 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರೂ, ತನಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಅದರಿಂದ ಕಾಂಗ್ರೆಸ್ ಪಕ್ಷದಿಂದ ಹೊರ ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾರಾಯಣ್ ತಮ್ಮ ನಿರ್ಧಾರದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಪಾತ್ರವನ್ನು ಬರೆದಿದ್ದಾರೆ. ಈ ವೇಳೆ ನಾಯಕರಾದ ಅಶೋಕ್ ಚೌಹಾಣ್ ಮತ್ತು ಅಹ್ಮದ್ ಪಾಟೀಲ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಪಕ್ಷಕ್ಕೆ ಸೇರ್ಪಡೆಯದಾಗಿನಿಂದ ರಾಜಕೀಯ ಕಾರಣಗಳಿಗಾಗಿ ಹಲವು ಸಂಘರ್ಷಗಳು ನಡೆದಿದೆ ಎಂದು ಹೇಳಿದರು.

ನಾರಾಯಣ್ ಶುಕ್ರವಾರದಿಂದ ಮಹಾರಾಷ್ಟ್ರ ರಾಜ್ಯ ಪ್ರವಾಸವನ್ನು ಕೈಗೊಳ್ಳಲಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಅಶೋಕ್ ಚೌಹಾಣ್ ಅವರ ಸ್ವ ಕ್ಷೇತ್ರಗಳಲ್ಲಿಯು ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಪ್ರಸ್ತುತ ಕಾಂಗ್ರೆಸ್‍ನಿಂದ ಹೊರಬಂದಿರುವ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಕೆಲ ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾರನ್ನು ಭೇಟಿ ಮಾಡಿದ್ದಾರೆ ಎನ್ನುವ ವರದಿಯೂ ಪ್ರಕಟವಾಗಿದೆ. ಇದಕ್ಕೆ ಪೂರಕ ಎಂಬಂತೆ ಗಣೇಶ ಹಬ್ಬದ ವೇಳೆ ಸಿಎಂ ಫಡ್ನಾವಿಸ್ ರಾಣೆ ಅವರ ಮನೆಗೆ ಭೇಟಿ ನೀಡಿದ್ದರು.

ಮರಾಠಿ ಸಮುದಾಯ ಪ್ರಭಾವಿ ನಾಯಕನಾಗಿರುವ ರಾಣೆಯವರು ಮುಂದಿನ ನಿರ್ಧಾರದ ಬಗ್ಗೆ ಯಾವುದೇ ವಿವರ ನೀಡಿಲ್ಲ. ಆದರೆ ದಸರಾ ಹಬ್ಬದ ವೇಳೆಗೆ ತನ್ನ ತೀರ್ಮಾನವನ್ನು ತಿಳಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಜೊತೆಗೆ ರಾಜ್ಯದ ಹಿರಿಯ ಶಿವಸೇನೆ ಹಾಗೂ ಕಾಂಗ್ರೆಸ್ ನಾಯಕರು ಸೇರಲಿದ್ದಾರೆ ಎಂದು ತಿಳಿಸಿದರು.

ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ಪ್ರಾಮುಖ್ಯತೆ ಜಾಸ್ತಿ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಬಾಳಾ ಠಾಕ್ರೆಯವರು ನಾರಾಯಣ ರಾಣೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಬಳಿಕ ರಾಣೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

1999ರ ಫೆಬ್ರವರಿ 1 ರಿಂದ, 199ರ ಫೆಬ್ರವರಿ ಅಕ್ಟೋಬರ್ 17ರ ವರೆಗೆ ನಾರಾಯಣ ರಾಣೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *