ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಗಾಲ್ ಹುಲಿಗಳ ಜೊತೆಗಿನ ಕಾದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಬಿಳಿ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿ ಮೇಲೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಮೂರು ದಿನಗಳ ಬಳಿಕ ಮೃತಪಟ್ಟಿದೆ ಎಂದು ಪಾರ್ಕ್ ನ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಆಗಿದ್ದು ಏನು?
ಉದ್ಯಾನವನದ ಬೆಂಗಾಲ್ ಹುಲಿಗಳಿದ್ದ ಕೇಜ್‍ಗೆ ಹೋಗಲು ಬಿಳಿ ಹುಲಿಗೆ ಸಾಧ್ಯವಿಲ್ಲ. ಆದರೆ ಬಿಳಿ ಹುಲಿಯೊಂದು ದಾರಿ ತಪ್ಪಿ ಹೋಗಿತ್ತು ಈ ವೇಳೆಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿತ್ತು. ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟುಗಳಾಗಿದ್ದರಿಂದ ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ: ಹತ್ತು ದಿನಗಳ ಹಿಂದೆ ಚಿರತೆಯೊಂದು ಸಾವನ್ನಪ್ಪಿತ್ತು. ಅಷ್ಟೇ ಅಲ್ಲದೇ ಒಂದು ತಿಂಗಳ ಹಿಂದೆ ಝೀಬ್ರಾ ಕೂಡ ಮೃತಪಟ್ಟಿತ್ತು ಆದರೆ ಈಗ ಬಿಳಿ ಹುಲಿ ಕೂಡ ಮೃತಪಟ್ಟಿದೆ. ಪಾರ್ಕ್ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಪ್ರಾಣಿಗಳು ಮೃತಪಡುತ್ತಿದ್ದು, ಹಿರಿಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ ಎಂದು ಪ್ರಾಣಿ ಪ್ರಿಯರಿಂದ ಟೀಕೆ ವ್ಯಕ್ತವಾಗಿದೆ.