ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

Public TV
2 Min Read
radhika murder

 

ಹೈದರಾಬಾದ್: ಮರ್ಯಾದಾ ಹತ್ಯೆಗೆ ತೆಲಂಗಾಣದಲ್ಲಿ 13 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಹುಡುಗನೊಂದಿಗೆ ಮಾತನಾಡುತ್ತಿದ್ದಳೆಂಬ ಕಾರಣಕ್ಕೆ ತಂದೆಯೇ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಶವಕ್ಕೆ ಬೆಂಕಿ ಇಟ್ಟು, ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ.

13 ವರ್ಷದ ರಾಧಿಕಾ ಕೊಲೆಯಾದ ದುರ್ದೈವಿ. ಹೈದರಾಬಾದ್‍ನಿಂದ 130 ಕಿ.ಮೀ ದೂರದಲ್ಲಿರುವ ಚಿಂತಪಲ್ಲಿ ಗ್ರಾಮದಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ. ಬಾಲಕಿ ರಾಧಿಕಾ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ರಾಧಿಕಾ ಯಾವಾಗ್ಲೂ ತುಂಬಾ ಉತ್ಸುಕಳಾಗಿರುತ್ತಿದ್ದಳು. ಹಾಡು ಹೇಳೋದು ಅವಳಿಗೆ ತುಂಬಾ ಇಷ್ಟ ಅಂತ ಆಕೆಯ ಕ್ಲಾಸ್‍ಮೇಟ್‍ಗಳು ಹೇಳಿದ್ದಾರೆ.

ರಾಧಿಕಾ ತಂದೆ ನರಸಿಂಹ ಕೃಷಿಕನಾಗಿದ್ದು, ತನ್ನ ಮಗಳು ಅದೇ ಗ್ರಾಮದ ಹುಡುಗನೊಬ್ಬನೊಂದಿಗೆ ಆಗಾಗ ಮಾತನಾಡುತ್ತಿದ್ದುದನ್ನು ಗಮನಿಸಿದ್ದ. ಸೆಪ್ಟೆಂಬರ್ 15ರಂದು ಸಂಜೆ ರಾಧಿಕಾ ಶಾಲೆ ಮುಗಿದ ನಂತರ ಮನೆಗೆ ಬಂದು, ಮನೆಯಲ್ಲಿ ಯಾರೂ ಇಲ್ಲವಾದ ಕಾರಣ ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಗೆ ಹೋಗಿದ್ದಳು.

ರಾಧಿಕಾ ಪೋಷಕರು ಕೆಲಸ ಮುಗಿಸಿ ಹಿಂದಿರುಗಿದ ನಂತರ ರಾಧಿಕಾ ಅದೇ ಹುಡುಗನೊಂದಿಗೆ ಮಾತನಾಡುತ್ತಿದ್ದುದನ್ನು ನೋಡಿದ್ದರು. ಆ ಹುಡುಗನೊಂದಿಗೆ ಮಾತನಾಡುವ ಸಲುವಾಗೇ ಆಕೆ ಸಂಬಂಧಿಕರ ಮನೆಗೆ ಆಗಾಗ ಹೋಗ್ತಿರ್ತಾಳೆ ಎಂದು ಭಾವಿಸಿ, ಈ ಬಗ್ಗೆ ರಾಧಿಕಾಳನ್ನ ಪ್ರಶ್ನಿಸಿದ್ದರು. ಆಗ ರಾಧಿಕಾ ಹಾಗೇ ಸುಮ್ಮನೆ ಮಾತಾಡುತ್ತಿದ್ದೆವು ಅಷ್ಟೇ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ನರಸಿಂಹ, ಕುಟುಂಬದ ಮರ್ಯಾದೆ ಹಾಳು ಮಾಡುತ್ತಿದ್ದೀಯ ಎಂದು ಕೋಪದಲ್ಲಿ ರಾಧಿಕಾಗೆ ಹೊಡೆಯಲು ಶುರುಮಾಡಿದ್ದ. ಕೋಪದಿಂದ ಆಕೆಯ ಕತ್ತು ಹಿಸುಕಿದ್ದ.

ನಂತರ ಬಾಲಕಿ ಸತ್ತಿದ್ದಾಳೆಂದು ಭಯಗೊಂಡು ತಾಯಿ ಲಿಂಗಮ್ಮ ಹಾಗೂ ತಂದೆ ನರಸಿಂಹ ಶವಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ನಂತರ ಬಾಲಕಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ದಾಖಲಿಸಿದ್ದರು.

ಆದ್ರೆ ಮಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿ ಕೊಲೆಯಾಗಿರುವುದು ದೃಢಪಟ್ಟಿದೆ. ಬಾಲಕಿಯ ನಾಲಗೆ ಹೊರಗೆ ಚಾಚಿದ್ದರಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಆ ವ್ಯಕ್ತಿ ಅಕ್ಕಪಕ್ಕ ಓಡಾಡಿ ಇತರೆ ವಸ್ತುಗಳಿಗೂ ಬೆಂಕಿ ಹೊತ್ತಿಕೊಳ್ಳುತ್ತದೆ. ಆದ್ರೆ ರಾಧಿಕಾಳ ದೇಹ ಅರ್ಧ ಸುಟ್ಟಿದ್ದು, ಒಂದೇ ಸ್ಥಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಮೊದಲೇ ಆಕೆಯನ್ನು ಕೊಂದು ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಅನುಮಾನವಿತ್ತು ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಬಾಲಿ ಗಂಗಾರೆಡ್ಡಿ ತಿಳಿಸಿದ್ದಾರೆ.

ತಂದೆ ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಮಗಳನ್ನು ಕೊಲೆ ಮಡಿರುವುದಾಗಿ ತಂದೆ ಒಪ್ಪಿಕೊಂಡಿದ್ದಾನೆ. ರಾಧಿಕಾಳೊಂದಿಗೆ ಮಾತನಾಡುತ್ತಿದ್ದ ಹುಡುಗ ನನ್ನನ್ನು ನೋಡಿ ಓಡಿಹೋದ. ಕುಟುಂಬದ ಮರ್ಯಾದೆ ಹಾಳುಮಾಡುತ್ತಿದ್ದಾಳೆಂಬ ಕೋಪದಲ್ಲಿ ಆಕೆಯನ್ನು ಕೊಂದೆ ಎಂದು ನರಸಿಂಹ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ನರಸಿಂಹ ಯಾವಾಗ್ಲೂ ಬಾಲಕಿಯನ್ನ ಶಿಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದ. ರಾಧಿಕಾಗೆ ಗಾಯಕಿಯಾಗಬೇಕೆಂಬ ಕನಸಿತ್ತು. ಆಕೆ ಸಂಗೀತ ಕಾರ್ಯಕ್ರಮಗಳನ್ನು ನೋಡಿ ಅದನ್ನು ಅನುಕರಿಸುತ್ತಿದ್ದುದನ್ನು ತಂದೆ ವಿರೋಧಿಸುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪೊಲೀಸರು ರಾಧಿಕಾ ಪೋಷಕರ ವಿರುದ್ಧ ಕೊಲೆ ಹಾಗು ಸಾಕ್ಷಿ ನಾಶ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *