ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ

Public TV
2 Min Read
Sukanyeah Krishnan b

ಮುಂಬೈ: ಆಕೆ ಪುರುಷನ ದೇಹದಲ್ಲಿದ್ದ ಮಹಿಳೆ, ಆತ ಮಹಿಳೆಯ ದೇಹದಲ್ಲಿದ್ದ ಪುರುಷ. ಮೂರು ವರ್ಷಗಳ ಹಿಂದೆ ಲಿಂಗ ಪರಿವರ್ತನೆಗೆಂದು ಮುಂಬೈಗೆ ಬಂದಾಗ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರ ಪರಿಚಯ ಕೊನೆಗೆ ಪ್ರೇಮವಾಗಿ ತಿರುಗಿತ್ತು. ಅವನಾದ ಅವಳು ಹಾಗೂ ಅವಳಾದ ಅವನು ಮುಂದಿನ ತಿಂಗಳು ಮದುವೆಯಾಗ್ತಿದ್ದಾರೆ.

ಚಿಕ್ಕಂದಿನಲ್ಲಿ ಬಿಂದು ಆಗಿದ್ದ 46 ವರ್ಷದ ಆರವ್ ಅಪ್ಪುಕುಟ್ಟನ್ ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆಗೆ ಹೋದಾಗ ತನ್ನ ಬಾಳ ಸಂಗಾತಿಯನ್ನ ಭೇಟಿಯಾದ್ರು. ಇನ್ನು ಚಂದು ಆಗಿದ್ದ 22 ವರ್ಷದ ಸುಕನ್ಯಾ ಕೃಷ್ಣನ್ ಮೊದಲನೇ ಅಪಾಯಿಂಟ್‍ಮೆಂಟ್‍ಗಾಗಿ ಆಸ್ಪತ್ರೆಗೆ ಬಂದಿದ್ರು.

ಸಂಬಂಧಿಯೊಬ್ಬರಿಂದ ನನಗೆ ಕರೆ ಬಂದಿತ್ತು. ನನ್ನ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ಅವರೊಂದಿಗೆ ಮಲೆಯಾಳಂನಲ್ಲಿ ಮಾತನಾಡ್ತಿದ್ದೆ. ಅವರೂ ಕೂಡ ಫೋನ್‍ನಲ್ಲಿ ಮತ್ತೊಬ್ಬರೊಂದಿಗೆ ಮಲಯಾಳಂನಲ್ಲೇ ಮಾತನಾಡ್ತಿದ್ರು. ಕಾಲ್ ಕಟ್ ಮಾಡಿದ ನಂತರ ಆರವ್ ನನ್ನ ಬಳಿ ಬಂದು ನಾನು ಕೇರಳದವಳಾ ಎಂದು ಕೇಳಿದ್ರು. ಅನಂತರ ನಮ್ಮ ಮಾತು ಮುಂದುವರೆಯಿತು ಅಂತ ಸುಕನ್ಯಾ ನೆನಪಿಸಿಕೊಳ್ತಾರೆ.

Sukanyeah Krishnan 2

ಆರವ್ ಹಾಗೂ ಸುಕನ್ಯಾ ವೈದ್ಯರಿಗಾಗಿ 3 ಗಂಟೆಗಳ ಕಾಲ ಕಾಯುತ್ತಿದ್ದ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಿತ್ತು. ಕೊನೆಗೆ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಊರಿಗೆ ಹೋದ ನಂತರವೂ ಮೆಸೇಜ್ ಮಾಡುತ್ತಿದ್ರು.

ಅವರು ಕೇರಳಗೆ ಹೋದ್ರು. ನಾನು ಬೆಂಗಳೂರಿಗೆ ಬಂದೆ. ಉದ್ಯೋಗಕ್ಕಾಗಿ ನಾನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದೆ. ಬಳಿಕ ಆರವ್ ನನಗೆ ಕರೆ ಮಾಡಿದ್ರು. ನಮ್ಮ ಚಿಕಿತ್ಸೆ ಹಾಗೂ ಸರ್ಜರಿ ಬಗ್ಗೆ ಚರ್ಚಿಸಿದೆವು. ಮೊದಲಿಗೆ ವಾರಕ್ಕೆ ಒಂದು ಬಾರಿ ಮಾತನಾಡುತ್ತಿದ್ದೆವು. ಅನಂತರ ವಾರಕ್ಕೆ ಎರಡು ಬಾರಿ, ಆಮೇಲೆ ಪ್ರತಿದಿನ ಫೋನ್‍ನಲ್ಲಿ ಮಾತನಾಡತೊಡಗಿದೆವು ಎಂದು ಸುಕನ್ಯಾ ಹೇಳಿದ್ದಾರೆ.

ಒಂದೇ ರಾಜ್ಯದವರು ಹಾಗೂ ಇಬ್ಬರಿಗೂ ಒಂದೇ ರೀತಿಯ ವೈದ್ಯಕೀಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು. ಆದರೂ ಇವರನ್ನ ಹತ್ತಿರವಾಗಿಸಿದ್ದೆಂದರೆ ಇಬ್ಬರಿಗೂ ತಮ್ಮಂತೆಯೇ ಇರುವವರಿಗೆ ಸಹಾಯ ಮಾಡಬೇಕೆಂಬ ಇಚ್ಛೆ ಇತ್ತು. ಆರವ್ ಸುಕನ್ಯಾ ಇಬ್ಬರೂ ತೃತೀಯ ಲಿಂಗಿ ಮಕ್ಕಳ ಪೋಷಕರಿಗೆ ಕೌನ್ಸೆಲಿಂಗ್ ಮಾಡುತ್ತಿದ್ರು. ಕೆಲವು ತಿಂಗಳ ಬಳಿಕ ಇಬ್ಬರೂ ಮತ್ತೊಮ್ಮೆ ಭೇಟಿಯಾಗಲು ನಿರ್ಧರಿಸಿ ಒಂದೇ ದಿನ ಮುಂಬೈ ಆಸ್ಪತ್ರೆಯಲ್ಲಿ ಅಪಾಯಿಂಟ್‍ಮೆಂಟ್ ಪಡೆದಿದ್ರು.

aarav

ನಮ್ಮಿಬ್ಬರಿಗೂ ಯಾವಾಗ ಪ್ರೇಮವಾಯ್ತು ಎಂದು ಗೊತ್ತಿಲ್ಲ. ಒಂದು ಸಲ ನಾವಿಬ್ಬರೂ ಕೈ ಹಿಡಿದುಕೊಂಡೆವು. ಅಲ್ಲಿಂದಲೇ ಆರಂಭವಾಯ್ತು. ಈಗ ನಾವು ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ. ನಮ್ಮಿಬ್ಬರ ಕುಟುಂಬಸ್ಥರೂ ಕೂಡ ಖುಷಿಯಾಗಿದ್ದಾರೆ. ನಾವು ಮಗುವೊಂದನ್ನ ದತ್ತು ಪಡೆಯಲು ನಿರ್ಧರಿಸಿದ್ದೇವೆ. ಯಾಕಂದ್ರೆ ಸರ್ಜರಿ ಬಳಿಕ ನಮಗೆ ಮಕ್ಕಳಾಗಲ್ಲ ಎಂಬುದು ಗೊತ್ತು ಅಂತ ಆರವ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *