ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

Public TV
1 Min Read
amin mattu prabhkar modi 1

ಉಡುಪಿ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ 75ನೇ ಸ್ಮರಣಾ ಕಾರ್ಯಕ್ರಮದಲ್ಲಿ ಸ್ವಾಮೀ ವಿವೇಕಾನಂದರ ಹಿಂದೂ ಧರ್ಮದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.

vlcsnap 2017 08 09 16h47m33s128

ಕರಾವಳಿಗರು ಬುದ್ಧಿವಂತರೆಂಬ ಪ್ರತೀತಿ ಇತ್ತು. ಆದರೆ ಇಂದು ಕೋಮುವಾದಿ- ತಾಲಿಬಾನಿಗಳೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಧರ್ಮಗುರುಗಳು ಮತ್ತು ಧರ್ಮಪೀಠಗಳು ಕೋಮುವಾದಿಗಳ ರಿಕ್ರೂಟ್‍ಮೆಂಟ್ ಸೆಂಟರ್ ಆಗುತ್ತಿವೆ. ಧರ್ಮಗುರುಗಳು ರಾಜಕೀಯ ಪಕ್ಷ ಸೇರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಪೇಜಾವರಶ್ರೀಗಳು ಉಡುಪಿ ಕೃಷ್ಣಮಠದಲ್ಲಿ ನಡೆಸಿದ ಇಫ್ತಾರ್ ಕೂಟಕ್ಕೆ ಪರೋಕ್ಷ ಟಾಂಗ್ ನೀಡಿದರು.

ಇಫ್ತರ್ ಕೂಟ ಮಾಡಿದಾಗ ನಮಗೆ ರೋಮಾಂಚನ ಆಯ್ತು. ಆದ್ರೆ ಮರುದಿನ ಉಮಾಭಾರತಿ ಬಂದು ಆಶೀರ್ವಾದ ಪಡೆಯುತ್ತಾರೆ. ರಾಮಮಂದಿರ ನಿರ್ಮಾಣದ ಬಗ್ಗೆಯೂ ಅಲ್ಲೇ ಮಾತುಕತೆಯಾಯ್ತು. ಮಾದಿಗರ ಸ್ವಾಮೀಜಿಗೆ ಪೇಜಾವರಶ್ರೀಗಳ ಸಂಪರ್ಕವಾದ ಮೇಲೆ ಅವರೂ ಬಿಜೆಪಿ ಸ್ವಾಮೀಜಿಯಾದರು ಎಂದರು.

vlcsnap 2017 08 09 16h47m48s410

ನಾನು ಕಾಂಗ್ರೆಸ್ ಪಕ್ಷ ಸೇರಿಲ್ಲ. ಮುಂದೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಸಿದ್ಧಾಂತ ನನಗೆ ಒಪ್ಪಿಗೆ ಇದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಘ ಪರಿವಾರದ ಯಾವ ನರಪಿಳ್ಳೆಯೂ ಇರಲಿಲ್ಲ. ವಾಜಪೇಯಿ ಈ ಬಗ್ಗೆ ಕ್ಷಮಾಪಣಾ ಪತ್ರ ಬರೆದಿದ್ದಾರೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಬ್ರಿಟೀಷರ ಜೊತೆ ಸೇರಿಕೊಳ್ಳಲು ತಯಾರಾಗಿದ್ದರು. ಮುಖವಾಡದ ದೇಶದ್ರೋಹಿಗಳನ್ನು ಬೆತ್ತಲು ಮಾಡಬೇಕು ಎಂದು ಅಮೀನ್ ಮಟ್ಟು ಕರೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬರಲು ರಾಜೀವ್ ಗಾಂಧಿ ಕಾರಣ. 18ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕು ನೀಡಿದರು. 21 ವಯಸ್ಸಿನ ಮಿತಿ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಪ್ರಧಾನಿ ಮೋದಿ ದೊಡ್ಡ ಜಾದೂಗಾರ. ಮೋಸ ಮಾಡುತ್ತಾರೆಂದು ಗೊತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲ ಎಂದು ಹರಿಹಾಯ್ದರು.

 

Share This Article
Leave a Comment

Leave a Reply

Your email address will not be published. Required fields are marked *