ಕೋಲಾರ: ವರಮಹಾಲಕ್ಷ್ಮಿ ಹಬ್ಬದ ದಿನವೇ ಕೋಲಾರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಗೆ ಐ20 ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳ್ಳಿ ಬಳಿ ಗುರುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಕೋಲಾರಕ್ಕೆ ಬರುತ್ತಿದ್ದ ಐ20 ಕಾರ್ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಎದುರಿನ ರಸ್ತೆಯಲ್ಲಿ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರ್ ನಲ್ಲಿದ್ದ ಕೋಲಾರ ಮೂಲದ ಶ್ರೀಹರಿ(23), ರೋಹನ್(22), ಸುಭಾಷ್(21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ತಿಕ್(24) ಹಾಗೂ ಬಿಶ್ವಾಸ್(25) ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಿಂದ ಕಾರ್ ನಜ್ಜುಗುಜ್ಜಾಗಿದೆ.
ಬಸ್‍ನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮೃತರೆಲ್ಲರೂ ಕೋಲಾರ ನಗರದ ಜ್ಯುವೆಲ್ಲರಿ ಅಂಗಡಿ ಮಾಲೀಕರ ಮಕ್ಕಳಾಗಿದ್ದು, ಕಳೆದ ರಾತ್ರಿ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ವಾಪಸ್ ಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವಗಳನ್ನು ಆರ್‍ಎಲ್ ಜಾಲಪ್ಪ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿ, ವಾಹನಗಳನ್ನು ತೆರವುಗೊಳಿಸಿದ್ದಾರೆ.