ಬಿಹಾರದಲ್ಲಿ ನಿತೀಶ್ ಕೈ ಹಿಡಿದ ಮೋದಿ-ಇಂದು ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ

Public TV
3 Min Read
pm modi nitish kumar 2

ಪಾಟ್ನಾ: ಬಿಹಾರದಲ್ಲಿ ಮಹಾಮೈತ್ರಿ ಮುರಿದ 24 ಗಂಟೆಯೊಳಗೇ ಹೊಸ ಸರ್ಕಾರ ರಚನೆ ಆಗ್ತಿದೆ. ನಿರೀಕ್ಷೆಯಂತೆ ಸೂಪರ್ ಫಾಸ್ಟಾಗಿ ಪ್ರಧಾನಿ ನರೇಂದ್ರ ಮೋದಿ, ನಿತೀಶ್‍ ಕುಮಾರ್ ಕೈ ಹಿಡಿದಿದ್ದಾರೆ.

ಮಹಾಘಟಬಂಧನ್ ಮುರಿದು ಬಿದ್ದಿದ್ದು, ಘರ್ ವಾಪ್ಸಿ ಆಗಿದೆ. ಪುತ್ರ ವ್ಯಾಮೋಹಕ್ಕೆ ಬಿದ್ದು ಮಹಾಮೈತ್ರಿ ಮುರಿದುಕೊಂಡಿದ್ದ ಲಾಲೂ ಪ್ರಸಾದ್ ಯಾದವ್‍ಗೆ ನಿತೀಶ್ ತಕ್ಕ ಪಾಠ ಕಲಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ರೂ ತೇಜಸ್ವಿ ಯಾದವ್ ಖುರ್ಚಿ ಬಿಡದ ಕಾರಣಕ್ಕೆ ನೊಂದು ನಿತೀಶ್‍ ಕುಮಾರ್ ಬುಧವಾರ ಸಂಜೆ ಮಹಾಘಟಬಂಧನ್ ಮುರಿದುಕೊಂಡಿದ್ರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

ಇದೇ ಅದ್ಬುತ ಕ್ಷಣಕ್ಕೆ ಕಾಯುತ್ತಿದ್ದ ಮೋದಿ, ನಿತೀಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ಚಿಟ್ಟರ್‍ನಲ್ಲೇ ಶಹಬ್ಬಾಸ್‍ಗಿರಿ ಕೊಟ್ಟು ಬೆನ್ನು ತಟ್ಟಿದ್ರು. ಆಗಲೇ ಚಿಗುರಿತ್ತು ಬಿಜೆಪಿ ಜೊತೆಗಿನ ಮರುಮೈತ್ರಿ. ನಿನ್ನೆ ಸಂಜೆ ನಂತ್ರ ಆದ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಮುಖಂಡರು ಮಹತ್ವದ ಸಭೆ ನಡೆಸಿ, ಮೈತ್ರಿ ಸರ್ಕಾರ ರಚನೆಗೆ ನಿರ್ಧಾರ ಮಾಡಿದ್ದಾರೆ.

pm modi nitish kumar 3

ಜೆಡಿಯು ಹಾಗೂ ಬಿಜೆಪಿ ನಾಯಕರು ರಾತ್ರಿಯೇ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿ 132 ಶಾಸಕರ ಪಟ್ಟಿಯನ್ನೂ ಕೊಟ್ಟಿದ್ದಾರೆ. ನಿತೀಶ್‍ ಕುಮಾರ್ ಇಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ರೆ, ಬಿಜೆಪಿಯ ಸುಶೀಲ್ ಮೋದಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆಯೊಳಗೆ ಬಹುಮತ ಸಾಬೀತು ಮಾಡಿ ಅಂತಾ ಗವರ್ನರ್ ಸೂಚಿಸಿದ್ದಾರೆ.

ರಾತ್ರೋ ರಾತ್ರಿ ಪ್ರತಿಭಟನೆ: ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡ್ತಿದ್ರೆ ಆರ್‍ಜೆಡಿ ಏನೂ ಸುಮ್ಮನೇ ಕೂರಲಿಲ್ಲ. ಲಾಲೂ ಪುತ್ರ ತೇಜಸ್ವಿ ಯಾದವ್ ರಾಜಭವನದ ಮುಂದೆ ತಮ್ಮ ಬೆಂಬಲಿಗರ ಜೊತೆ ರಾತ್ರಿಯಿಡೀ ಭಾರೀ ಪ್ರತಿಭಟನೆ ಮಾಡಿದ್ರು. ಐವರು ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದ್ರು. ಬಳಿಕ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಂದ್ರು.

ಬಿಹಾರ ವಿಧಾನಸಭೆ ಬಲಾಬಲ:
ಬಿಹಾರ ಅಸೆಂಬ್ಲಿ – 243
ಸರಳ ಬಹುಮತ – 122
ಆರ್‍ಜೆಡಿ – 80
ಜೆಡಿಯು – 71
ಕಾಂಗ್ರೆಸ್ – 27
ಬಿಜೆಪಿ – 53
ಇತರೆ – 12 (ಎಲ್‍ಜೆಪಿ-02, ಆರ್‍ಎಲ್‍ಎಸ್‍ಪಿ-02, ಹೆಚ್‍ಎಎಂ-01, ಸಿಪಿಎಐ(ಎಂಎಲ್)-03, ಪಕ್ಷೇತರ-04)

modi nitish

 

ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಜೆಡಿಯು 71 ಸ್ಥಾನಗಳ ಜೊತೆ ಬಿಜೆಪಿಯ 53 ಶಾಸಕರು ಕೈ ಜೋಡಿಸಿದ್ರೆ ಸರ್ಕಾರ ರಚನೆಗೆ ಯಾವುದೇ ತೊಂದರೆಯಿಲ್ಲ. ಹೀಗಾಗಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರ ರಚನೆಗೆ ಜೈ ಎಂದಿದೆ.

ಲಾಲೂ ಹಾಗೂ ನಿತೀಶ್ ನಡುವೆ ಹೇಗೆ ಮನಸ್ತಾಪ ಶುರುವಾಯ್ತು. ಬಿಹಾರ ರಾಜಕೀಯದ ಗುದ್ದಾಟ ಸಾಗಿದ ಹಾದಿ ಹೇಗಿತ್ತು.

* ಜುಲೈ 12, 2017-ಭ್ರಷ್ಟಚಾರ ಆರೋಪ ಮುಕ್ತವಾಗಿ ಬಂದ್ರೆ ತೇಜಸ್ವಿ ಯಾದವ್ ಅಧಿಕಾರದಲ್ಲಿ ಮುಂದುವರಿಕೆ-ನಿತೀಶ್ ಸ್ಪಷ್ಟನೆ.
* ಜುಲೈ 14, 2017-ರಾಜೀನಾಮೆ ನೀಡೋ ಮಾತೇ ಇಲ್ಲ-ಲಾಲೂ ಹಾಗೂ ತೇಜಸ್ವಿ ಯಾದವ್ ಸ್ಪಷ್ಟನೆ.
* ಜುಲೈ 15, 2017-`ವಿಶ್ವ ಯುವ ಕುಶಾಲ್ ದಿವಸ್’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ತೇಜಸ್ವಿ ಹೆಸರು ಕಿತ್ತಾಕಿದ ನಿತೀಶ್.
* ಜುಲೈ 22, 2017-ಬಿಹಾರ ಮೈತ್ರಿ ರಾಜಕೀಯ ಸರಿ ಮಾಡಲು ರಾಹುಲ್ ಗಾಂಧಿ ಯತ್ನ, ಆದರೆ ವಿಫಲ.
* ಜುಲೈ 26, 2017-ಯಾವುದೇ ಕಾರಣಕ್ಕೂ ತೇಜಸ್ವಿ ರಾಜೀನಾಮೆ ನೀಡಲ್ಲ-ಲಾಲೂ ಸ್ಪಷ್ಟ ಸಂದೇಶ ರವಾನೆ.
* ಜುಲೈ 26, 2017-ಸಂಜೆ 5 ಗಂಟೆ – ಮಹಾಘಟಬಂಧನ್ ಅಂತ್ಯ, ಸಿಎಂ ಸ್ಥಾನಕ್ಕೆ ನಿತೀಶ್‍ ಕುಮಾರ್ ರಾಜೀನಾಮೆ.
* ಜುಲೈ 27, 2017-ಇಂದು ಬೆಳಗ್ಗೆ 10 ಗಂಟೆಗೆ ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ.

ಒಟ್ಟಿನಲ್ಲಿ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *