ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

Public TV
4 Min Read
jio 2

ಮುಂಬೈ: ಜಿಯೋದ ಕಡಿಮೆ ಬೆಲೆಯ ಫೀಚರ್ ಫೋನ್ ದೇಶದ ಮೂರು ಕ್ಷೇತ್ರಗಳ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

ಟೆಲಿಕಾಂ ಕಂಪೆನಿ, ಕೇಬಲ್ ಮತ್ತು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳಿಗೆ ಜಿಯೋ ಹೊಡೆತ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆಯಾಗುತ್ತಿದ್ದಂತೆ ಟೆಲಿಕಾಂ ಮತ್ತು ಡಿಟಿಎಚ್ ಕಂಪೆನಿಗಳ ಶೇರುಗಳು ಭಾರೀ ಕುಸಿತಗೊಂಡಿದೆ.

ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಹೇಗೆ?
ದೇಶದಲ್ಲಿ ಪ್ರಸ್ತುತ ಕಡಿಮೆ ಬೆಲೆಯ ವೋಲ್ಟ್ ಫೋನ್ ಗಳಿಗೆ ಕನಿಷ್ಠ 3-4 ಸಾವಿರ ರೂ. ಬೆಲೆ ಇದೆ. ಆದರೆ ಜಿಯೋ 1500 ರೂ. ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ 3 ವರ್ಷದ ಬಳಿಕ ಈ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದೆ. ಹೀಗಾಗಿ ಉಚಿತವಾಗಿ ಸಿಗುವ ಕಾರಣ ಜನ ಜಿಯೋ ಫೋನ್ ಖರೀದಿಸಿಲು ಆರಂಭಿಸಿದರೆ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

2016- 17ರ ಹಣಕಾಸು ವರ್ಷದಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಕಂಪೆನಿಗಳು ಹೆಚ್ಚು ಫೋನ್ ಮಾರಾಟ ಆಗದೇ ಇರಲು ಜಿಯೋ ಕಾರಣ ಎನ್ನುವ ಮಾತುಗಳು ಕೇಳಿ ಬಂದಿತ್ತು. ಭಾರತೀಯ ಕಂಪೆನಿಗಳು ಈ ಹಿಂದೆ ಫೋನ್ ಗಳನ್ನು ಬಿಡುಗಡೆ ಮಾಡಿದ್ದರೂ ಆ ಫೋನ್ ಗಳ ಪೈಕಿ ಬಹುತೇಕ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಹೀಗಾಗಿ ಜನರು ಜಿಯೋಗೆ ಸಪೋರ್ಟ್ ಮಾಡುವ ಎಲ್‍ಟಿಇ ಫೋನ್ ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಪರಿಣಾಮ ಚೀನಾ ಕಂಪೆನಿಗಳ ಮಾರುಕಟ್ಟೆ ಪಾಲು ಭಾರತದಲ್ಲಿ ಹೆಚ್ಚಾಗಿತ್ತು. ಈಗ 1500 ರೂ. ಬೆಲೆಯಲ್ಲಿ ಫೋನ್ ಬಿಡುಗಡೆ ಮಾಡಿದ್ದು ಎಲ್‍ಟಿಇ ಫೋನ್ ತಯಾರಿಸುತ್ತಿದ್ದ ಚೀನಾ ಕಂಪೆನಿಗಳಿಗೂ ಜಿಯೋದಿಂದಾಗಿ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಡಿಟಿಎಚ್, ಕೇಬಲ್ ಟಿವಿ:
ಇಲ್ಲಿಯವರೆಗೆ ಜನ ಟಿವಿ ವೀಕ್ಷಿಸಲು ಡಿಟಿಎಚ್, ಕೇಬಲ್ ಗಳನ್ನು ಅವಲಂಭಿಸಿದ್ದರು. ಆದರೆ ಜಿಯೋ ಈಗಾಲೇ ಟಿವಿ ಆಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡ ಸೇರಿದಂತೆ ದೇಶದ 10 ಭಾಷೆಯಲ್ಲಿರುವ ವಾಹಿನಿಗಳು, ಕ್ರೀಡಾ ವಾಹಿನಿಗಳು ಲಭ್ಯವಿದೆ. ಈ ಆಪ್‍ನಲ್ಲಿ ಯಾವ ಸಮಯದಲ್ಲಿ ಯಾವ ಕಾರ್ಯಕ್ರಮ ಪ್ರಸಾರವಾಗಿದೆಯೋ ಆ ಕಾರ್ಯಕ್ರಮವನ್ನು ಮತ್ತೆ ವೀಕ್ಷಿಸಲು ಸಾಧ್ಯವಿದೆ.

ಈಗ ಹೊಸದಾಗಿ ಮೊಬೈಲ್ ನಿಂದ ಟಿವಿ ವೀಕ್ಷಿಸಲು ‘ಜಿಯೋ ಫೋನ್ ಟಿವಿ ಕೇಬಲ್’ ತಂದಿದ್ದು, ಇದು ಕೇವಲ ಸ್ಮಾರ್ಟ್ ಟಿವಿ ಮಾತ್ರ ಅಲ್ಲ ಈಗ ಇರುವ ಟಿವಿಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ 309 ರೂ. ಜಿಯೋ ಧನ್ ಧನಾ ಧನ್ ಆಫರ್ ಹಾಕಿದ್ರೆ ಪ್ರತಿ ದಿನ 3-4 ಗಂಟೆ ವಿಡಿಯೋಗಳನ್ನು ಸಹ ವೀಕ್ಷಿಸಬಹುದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಡಿಟಿಎಚ್, ಕೇಬಲ್ ಟಿವಿ ಉದ್ಯಮಕ್ಕೆ ಹೊಡೆತ ಬೀಳಬಹುದು ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

ಟೆಲಿಕಾಂ ಕ್ಷೇತ್ರ:
ಜಿಯೋ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಬಳಿಕ ಭಾರತ ಟೆಲಿಕಾಂ ರಂಗದಲ್ಲಿ ಹೊಸ ಕ್ರಾಂತಿ ಆರಂಭವಾಗಿತ್ತು. ಅಲ್ಲಿಯವರೆಗೆ 1 ಜಿಬಿ ಡೇಟಾಗೆ 250 ರೂ. ದರ ನಿಗದಿ ಮಾಡಿದ್ದ ಕಂಪೆನಿಗಳು ಜಿಯೋದಿಂದಾಗಿ ಅವುಗಳು ಹೊಸ ಹೊಸ ಆಫರ್ ಬಿಡುಗಡೆ ಮಾಡುವ ಮೂಲಕ ಡೇಟಾ ಸಮರ ಆರಂಭಗೊಂಡಿತ್ತು. ಈ ನಡುವೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಟೆಲಿಕಾಂ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಹ ನಡೆದಿತ್ತು. ಆರಂಭದಲ್ಲಿ ಜಿಯೋದ 4ಜಿ ಇಂಟರ್ ನೆಟ್ ವೇಗ ಕಡಿಮೆ ಇದ್ದರೆ ನಂತರದ ದಿನಗಳಲ್ಲಿ ದೇಶದಲ್ಲಿ ವೇಗದ ಇಂಟರ್ ನೆಟ್ ಸೇವೆಯನ್ನು ಜಿಯೋ ನೀಡುತ್ತಾ ಬಂದಿದೆ.

ಶುಕ್ರವಾರದ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ, ದೇಶದಲ್ಲಿ 50 ಕೋಟಿ ಜನರು ಡಿಜಿಟಲ್ ಜಗತ್ತಿಗೆ ಸೇರ್ಪಡೆಯಾಗಿಲ್ಲ. ಹೀಗಾಗಿ ಅವರನ್ನು ಈ ಜಗತ್ತಿಗೆ ಸೇರಿಸಲು ಈ ಎಲ್‍ಟಿಟಿ ಫೋನ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಕಡಿಮೆ ಬೆಲೆ ಜೊತೆಗೆ ಕರೆ, ಸಂದೇಶಗಳು ಉಚಿತವಾಗಿ ಸಿಗುವ ಕಾರಣ ಜಿಯೋಗೆ ಮತ್ತಷ್ಟು ಗ್ರಾಹಕರು ಹೊಸದಾಗಿ ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

telecom market india

ಕಡಿಮೆ ಬೆಲೆಯಲ್ಲಿ ಯಾಕೆ?
ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿದೆ.

ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಏನಿದು ವಾಯ್ಸ್ ಓವರ್ ಎಲ್‍ಟಿಇ? ಉಚಿತ ಕರೆ ಯಾಕೆ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಹಲವು ಫೋನ್ ಗಳು ಎಲ್‍ಟಿಇ ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಏರ್ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.

 

jio 16

jio 15

jio 14

jio 12

jio 11

jio 10

jio 9

jio 8

jio 7

jio 4

jio 1

Share This Article
Leave a Comment

Leave a Reply

Your email address will not be published. Required fields are marked *