ಕೊಪ್ಪಳ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯ ಸ್ವಕ್ಷೇತ್ರದಲ್ಲೇ ಪಶುಭಾಗ್ಯ ಯೋಜನೆಯಲ್ಲಿ ಗೋಲ್‍ಮಾಲ್ ನಡೆದಿರೋ ಆರೋಪ ಕೇಳಿಬಂದಿದೆ.
ಸ್ವತಃ ಸಚಿವರೇ ನಿಯಮ ಬಾಹಿರವಾಗಿ ಪಶುಭಾಗ್ಯ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿರೋ ದಾಖಲೆಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. 2016-17ನೇ ಸಾಲಿನ ಪಶುಭಾಗ್ಯ ಯೋಜನೆಯಡಿ ಯೋಜನೆಗೆ ಸುಮಾರು 1800 ಅರ್ಜಿ ಬಂದಿದ್ದು, ಲಾಟರಿ ಮೂಲಕ ಆಯ್ಕೆ ಮಾಡಬೇಕಿತ್ತು. ಆದ್ರೆ ಅಯ್ಕೆ ಸಮಿತಿ ಅಧ್ಯಕ್ಷರಾಗಿರೋ ಸಚಿವ ರಾಯರೆಡ್ಡಿ ಕೇವಲ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಅಡುಗೆ ಸಹಾಯಕಿಯರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಿಗಷ್ಟೇ ಸಾಲ ಮತ್ತು ಧನಸಹಾಯ ಸೌಲಭ್ಯ ನೀಡಿ ಯೋಜನೆಯ ಉದ್ದೇಶವನ್ನೇ ಬುಡಮೇಲು ಮಾಡಿದ್ದಾರೆ.
ತಮ್ಮ ಇಚ್ಚೆಗೆ ಬಂದಂತೆ 106 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಣ ನೀಡಿದ್ದಾರೆ. ಸಮಿತಿ ಸದಸ್ಯರು ಹಾಗೂ ಪಶು ಇಲಾಖೆ ಅಧಿಕಾರಿ ಡಾ.ತಿಪ್ಪಣ್ಣ ತಳಕಲ್, ಸಚಿವರ ಕೈಗೊಂಬೆಯಂತೆ ನಡೆದುಕೊಂಡು ಅರ್ಹ ಫಲಾಭುವಿಗಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಆರೋಪ ಕೇಳಿಬಂದಿದೆ. ಈ ಬಗ್ಗೆ ಯಲಬುರ್ಗಾ ತಾಲೂಕು ಪಂಚಾಯತ್ ಉಪಾಧ್ಯಕ್ಷ ವಿಶ್ವನಾಥ ನೇತೃತ್ವದಲ್ಲಿ ಬಿಜೆಪಿಯ 11 ಸದಸ್ಯರು ಕೊಪ್ಪಳ ಡಿಸಿ, ಜಿಪಂ ಸಿಇಒ, ಜಿಪಂ ಉಪ ಕಾರ್ಯದರ್ಶಿ ಹಾಗೂ ಎಸಿಬಿಗೆ ದೂರು ನೀಡಿದ್ದಾರೆ.