ವಿಜಯಪುರ: ಶಾಲೆಯ ರಾಷ್ಟ್ರ ಧ್ವಜ ಹಾರಿಸುವ ಕಂಬದಲ್ಲಿ ಬಿಜೆಪಿ ಧ್ವಜ ಹಾರಿಸಿದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.
ಶನಿವಾರ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಗಣಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಪರಿಷತ್ ವಿರೋಧ ಪಕ್ಷದ ನಾಯಕ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಇಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು. ಆ ಸಭೆಯ ತಯಾರಿ ವೇಳೆ ಶಾಲೆಯ ರಾಷ್ಟ್ರಧ್ವಜಸ್ಥಂಬಕ್ಕೆ ಕಾರ್ಯಕರ್ತರು ಬಿಜೆಪಿ ಧ್ವಜ ಹಾಕಿದ್ದರು.
ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಗಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಶೀಲಾಬಾಯಿ ಪ್ರಶಾಂತ ಪವಾರ ಅವರೇ ಈ ಅವಘಡಕ್ಕೆ ಕಾರಣವೆಂದು ಗಣಿ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಯಾವ ಜಾಗದಲ್ಲಿ ಯಾವ ಬಾವುಟಗಳು ಹಾರಿಸಬೇಕು, ಹಾರಿಸಬಾರದು ಅನ್ನೋದಕ್ಕೆ ಸಾಕಷ್ಟು ನಿಯಮಗಳಿವೆ. ರಾಷ್ಟ್ರ ಧ್ವಜ ಹಾರಾಡುವ ಸ್ಥಳದಲ್ಲಿ ಯಾವುದೇ ಪಕ್ಷಗಳ ಬಾವುಟವನ್ನು ಧ್ವಜಾರೋಹಣ ಮಾಡಬಾರದು. ಇದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸರ್ಕಾರಿ ಶಾಲೆ ಎದುರು ಬಾವುಟ ಹಾರಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎಸ್ಪಿಗೆ ಸೂಚಿಸುವುದಾಗಿ ಹೇಳಿದ್ದಾರೆ.