ಬೆಂಗಳೂರು: ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ ಸಿಎಂ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ನನ್ನ ಬಗ್ಗೆ ಸಿಎಂ ಸಿದ್ದರಾಮಯ್ಯ ಸಲ್ಲದ ಹೇಳಿಕೆ ನೀಡಿದ್ದಾರೆ. ಅಮಿತ್ ಷಾ ಇಲ್ಲದಿದ್ರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಇದಿದ್ದರೆ ಯಡಿಯೂರಪ್ಪ ಜೈಲಿನಲ್ಲಿ ಇರುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿದ ಸಿಎಂ ಮೂರು ದಿನಗಳ ಒಳಗಡೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಎಸ್‍ವೈ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಮನೆಗೆ ಬನ್ನಿ: ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ದೇಶಾದ್ಯಂತ ಜಾರಿಯಲ್ಲಿರುವ ವಿಸ್ತಾರಕ ಯೋಜನೆಯಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಇಂದಿನಿಂದ ಮನೆ-ಮನೆ ಸಂಪರ್ಕ ಅಭಿಯಾನ ಆರಂಭಿಸಿದ್ದು, ಈ ವೇಳೆ ನಮ್ಮ ಮನೆಗಳಿಗೂ ಬರುವಂತೆ ಕ್ರೈಸ್ತ ಸಮುದಾಯ ಒತ್ತಾಯಿಸಿದೆ.
ಶಿವಾಜಿನಗರ ವಿಧಾನ ಸಭೆ ಕ್ಷೇತ್ರದ ಸಂಪಂಗಿರಾಮನಗರದಿಂದ ಪಾದಯಾತ್ರೆಯ ಮೂಲಕ ಅಭಿಯಾನ ಆರಂಭಿಸಿ ದೇವಾಂಗ ಸಮುದಾಯದ ನಟರಾಜ ಎಂಬುವರ ಮನೆಯಲ್ಲಿ ಉಪಹಾರ ಸೇವಿಸಿದರು. ಈ ವೇಳೆ ಕ್ರಿಶ್ಚಿಯನ್ ಮನೆಗಳಿಗೂ ಬರುವಂತೆ ಬಿಎಸ್‍ವೈ ಅವರನ್ನು ಸಮುದಾಯದ ಜೀವನ್ ಎಂಬವರು ಒತ್ತಾಯಿಸಿದ್ದಾರೆ. ಬಿಎಸ್‍ವೈ ನಮ್ಮ ಮನೆಗೂ ಬರಬೇಕು. ನಾವು ಕ್ರಿಶ್ಚಿಯನ್ ನಮ್ಮ ಮನೆಗೆ ಬಂದು ಬಿಎಸ್ ವೈ ಟೀ ಕುಡಿದು ಹೋಗಲಿ. ನಮಗೆ ಸಂತೋಷವಾಗುತ್ತದೆ. ನಮ್ಮ ಮನೆಗೆ ಬಿಎಸ್ ವೈ ಬರಲೇಬೇಕು ಎಂದು ಬಿಜೆಪಿ ಕಾರ್ಯಕರ್ತ ಜೀವನ್ ಘೋಷಣೆ ಕೂಗಿದ್ರು.
ನೆರವು ಕೇಳಿದ ಅಜ್ಜಿ: ಅಭಿಯಾನದ ವೇಳೆ ವೃದ್ಧೆ ನಾಗರತ್ನಮ್ಮ ಎಂಬವರು ಬಿಎಸ್‍ವೈ ಅವರನ್ನು ಅಡ್ಡಹಾಕಿ `ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಬೀದಿಯಲ್ಲಿದ್ದೇನೆ ನೆರವು ನೀಡಿ ಅಂತಾ ಅಳಲು ತೋಡಿಕೊಂಡ್ರು. ಈ ವೇಳೆ ಬಿಎಸ್‍ವೈ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ರು.
ಸಹಭೋಜನ ಏರ್ಪಾಡು: ಜನಸಂಪರ್ಕ ಅಭಿಯಾನದಡಿ ಭೇಟಿ ಮಾಡಿದ್ದ 66 ದಲಿತ ಕುಟುಂಬಗಳಿಗೆ ಯಡಿಯೂರಪ್ಪ ನಿವಾಸದಲ್ಲಿ ಸಹಭೋಜನ ಏರ್ಪಾಡು ಮಾಡಲಾಗಿದೆ. ಹೀಗಾಗಿ ಬಿಎಸ್‍ವೈ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ದಲಿತ ಕುಟುಂಬದವರೊಂದಿಗೆ ಊಟ ಮಾಡಲಿದ್ದಾರೆ. ಜನಸಂಪರ್ಕ ಅಭಿಯಾನದಡಿ ಈ ವರೆಗೆ 27 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಿಗೆ ಬಿಎಸ್‍ವೈ ಭೇಟಿ ಕೊಟ್ಟಿದ್ದಾರೆ. 32 ಮೆರವಣಿಗೆ ಹಾಗೂ 27 ದಲಿತ ಸಂವಾದ ಕಾರ್ಯಕ್ರಮ ಮಾಡಿದ್ದಾರೆ. ದಲಿತರ ಮನೆಗೆ ಊಟಕ್ಕೆ ಹೋಗಿದ್ದನ್ನು ವಿಪಕ್ಷಗಳು ಟೀಕಿಸಿದ್ದ ಹಿನ್ನೆಲೆಯಲ್ಲಿ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ ತಾವು ಭೋಜನ ಸ್ವೀಕರಿಸಿದ್ದ 66 ಕುಟುಂಬಗಳ ಸದಸ್ಯರೊಂದಿಗೆ ತಮ್ಮ ನಿವಾಸದಲ್ಲೇ ಬಿಎಸ್‍ವೈ ಇಂದು ಊಟ ಮಾಡಲಿದ್ದಾರೆ. ನಂತರ ಆ ದಲಿತ ಕುಟುಂಬಗಳಿಗೆ ನೆನಪಿನ ಕಾಣಿಕೆ ಕೊಡಲಿದ್ದಾರೆ.