ಬೇಸಿಗೆ ಬಂತೆಂದರೆ ಸಾಕು ರಜೆ ಶುರುವಾಗುತ್ತದೆ. ರಜೆ ದಿನದಲ್ಲಿ ಎಲ್ಲಾದರೂ ಸುಂದರವಾದ ಜಾಗಕ್ಕೆ ಹೋಗಬೇಕು ಎನಿಸುತ್ತದೆ. ಆದರೆ ಮನಕ್ಕೆ ಹಿತ ನೀಡುವ ಹಾಗೂ ಬಜೆಟ್ ಸ್ನೇಹಿಯಾಗಿರುವ ಜಾಗವನ್ನು ಹುಡುಕುವುದೇ ಕಷ್ಟವಾಗಿಬಿಡುತ್ತದೆ. ಇನ್ನೂ ಕೆಲವರಿಗೆ ಹುಲ್ಲುಗಾವಲು ಪ್ರದೇಶಗಳಿಗೆ ಅಥವಾ ಪುರಾತನ ಇತಿಹಾಸ ಹೊಂದಿರುವ ಸ್ಥಳಗಳಿಗೆ ಹೋಗುವುದೆಂದರೆ ಖುಷಿ ನೀಡುತ್ತದೆ. ಆದರೆ ಇವೆಲ್ಲವೂ ಒಂದೇ ಜಾಗದಲ್ಲಿ ನೋಡಲು ಸಿಗುವಂತಹ ಪ್ರದೇಶ ಹುಡುಕುವುದರಲ್ಲಿ ರಜೆ ಕಳೆದು ಹೋಗಿಬಿಡುತ್ತದೆ. ಅದಕ್ಕೆ ನಿಮ್ಮ ಕನಸಿನ ಪಯಣವನ್ನು ನನಸಾಗಿಸಿಕೊಳ್ಳಲು ಉತ್ತರಾಖಂಡದಲ್ಲಿದೆ ಒಂದು ಸುಂದರ ತಾಣ.
ಪ್ರತಿ ಬೇಸಿಗೆಯಲ್ಲಿ ಲಕ್ಷಾಂತರ ಭಾರತೀಯರು ಒಂದೇ ರೀತಿಯ ಗಿರಿಧಾಮಗಳಿಗೆ, ತೀರ್ಥಯಾತ್ರೆಗೆ ಹೋಗುತ್ತಾರೆ ಶಿಮ್ಲಾ, ಮನಾಲಿಯಂತಹ ಪ್ರದೇಶಗಳು ಜನಜಂಗುಳಿಯಿಂದ ತುಂಬಿರುತ್ತದೆ. ಆದರೆ ಉತ್ತರಾಖಂಡದ ಜೋಹಾರ್ ಕಣಿವೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಪಿಥೋರಗಢ ಜಿಲ್ಲೆಯ ಕುಮಾವೂನ್ ಹಿಮಾಲಯದ ಆಳದಲ್ಲಿ ಸಿಲುಕಿರುವ ಈ ದೂರದ, ಅದ್ಭುತವಾದ ಕಣಿವೆ ಗೋರಿ ಗಂಗಾ ನದಿಯ ಉದ್ದಕ್ಕೂ ಟಿಬೆಟ್ ಗಡಿಯ ಬಳಿಯ ಮಿಲಾಮ್ ಹಿಮನದಿಯವರೆಗೆ ವ್ಯಾಪಿಸಿದೆ.
ಹೌದು, ಉತ್ತರಾಖಂಡದ ಪಿಥೋರಘಡ ಜಿಲ್ಲೆಯಲ್ಲಿ ಜೋಹರ್ ಕಣಿವೆ ಇದೆ. ಈ ಕಣಿವೆಯನ್ನು ಮಿಲಂ ಕಣಿವೆ ಅಥವಾ ಗೋರಿ ಗಂಗಾ ಕಣಿವೆ ಎಂದು ಕರೆಯುತ್ತಾರೆ. ಇದು ಭಾರತ ಮತ್ತು ಟಿಬೆಟ್ ನಡುವಿನ ಪುರಾತನ ವ್ಯಾಪಾರ ಮಾರ್ಗವಾಗಿ ಬಹಳ ಪ್ರಸಿದ್ಧವಾಗಿತ್ತು. ಈ ಕಣಿವೆಗೆ ಪ್ರವೇಶಿಸಲು ಮುನ್ಸಿಯಾರಿ ಆರಂಭಿಕ ತಾಣವಾಗಿದೆ. ಇಲ್ಲಿ ವಾಸಿಸುವ ಜನರನ್ನು ಶೌಕಾ ಅಥವಾ ಜೋಹಾರಿ ಶೌಕಾ ಎಂದು ಕರೆಯಲಾಗುತ್ತದೆ. ಇವರು ಟಿಬೆಟ್ ನೊಂದಿಗೆ ಸಾಂಪ್ರದಾಯಿಕವಾಗಿ ವ್ಯಾಪಾರ ಮಾಡುತ್ತಿದ್ದ ಸಮುದಾಯದವರಾಗಿದ್ದಾರೆ.
ಜೋಹಾರ್ ಕಣಿವೆ ಎಲ್ಲಿದೆ?
ಉತ್ತರಾಖಂಡದ ಉತ್ತರ ಪಿಥೋರಗಢ ಜಿಲ್ಲೆಯಲ್ಲಿ ನೆಲೆಗೊಂಡಿರುವ ಜೋಹಾರ್ ಕಣಿವೆ 2,298 ಮೀಟರ್ ಎತ್ತರದ ಬೆಟ್ಟದ ಪಟ್ಟಣವಾದ ಮುನ್ಸಿಯಾರಿಯಿಂದ ಪ್ರಾರಂಭವಾಗಿ, ಕಣಿವೆಯು ಎತ್ತರದ ಹಿಮಾಲಯದ ಆಳಕ್ಕೆ ವಿಸ್ತರಿಸಿದೆ. ನಂದಾ ದೇವಿ, ತ್ರಿಶೂಲ್, ಹಾರ್ಡಿಯೋಲ್, ನಂದಾ ಕೋಟ್ ಮತ್ತು ಗಮನಾರ್ಹವಾದ ಪಂಚಚುಲಿ ಶ್ರೇಣಿಯಂತಹ ಶಿಖರಗಳಿಂದ ಸುತ್ತುವರೆದಿರುವ ಈ ಕಣಿವೆಯು ಅದ್ಭುತ ದೃಶ್ಯಗಳನ್ನು ನೀಡುತ್ತದೆ.
ಜೋಹಾರ್ ಕಣಿವೆಯ ಸಾಂಸ್ಕೃತಿಕ ಹಾಗೂ ಇತಿಹಾಸಿಕ ಮಹತ್ವ:
1962ರ ಭಾರತ ಮತ್ತು ಚೀನಾ ಯುದ್ಧದ ಮೊದಲು ಈ ಕಣಿವೆಯು ಟಿಬೆಟ್ ಗೆ ಉಪ್ಪು, ಉಣ್ಣೆ ಮತ್ತು ಬೋರಾಕ್ಸ್ ಎನ್ನುವ ನೈಸರ್ಗಿಕ ಖನಿಜ ಸಾಗಿಸುವ ಪ್ರಮುಖ ದಾರಿಯಾಗಿತ್ತು. ಅಲ್ಲದೆ ಇಲ್ಲಿನ ಜನರು ಸುಂದರವಾದ ಉಣ್ಣೆಯ ಕಾರ್ಪೆಟ್ ಗಳನ್ನು ಮತ್ತು ಶಾಲುಗಳನ್ನು ತಯಾರಿಸುವಲ್ಲಿ ನೈಪುಣ್ಯ ಹೊಂದಿದ್ದಾರೆ. ಇವುಗಳ ಮಾರಾಟಕ್ಕಾಗಿ ಇಲ್ಲಿನ ಜನರು ಅತಿ ಎತ್ತರದ ಉಂಟಾ ಧುರಾ ಘಾಟಿಯ ಮೂಲಕ ಟಿಬೆಟ್ ಗೆ ಹೋಗುತ್ತಿದ್ದರು. ಅಲ್ಲದೇ ಭಾರತದಿಂದ ಧಾನ್ಯಗಳು, ಬಟ್ಟೆ ಮತ್ತು ಬೆಲ್ಲವನ್ನು ಕೊಂಡೊಯ್ದು ಟಿಬೆಟ್ ನಿಂದ ವಿನಿಯಮ ಮಾಡಿಕೊಂಡು ಬೋರಾಕ್ಸ್, ಉಪ್ಪು, ಉಣ್ಣೆ ಮತ್ತು ಮೇಕೆಗಳನ್ನು ತರುತ್ತಿದ್ದರು. ಬ್ರಿಟಿಷರ ಕಾಲದಲ್ಲೇ ಈ ಕಣಿವೆಯು ಅನ್ವೇಷಕರಿಗೆ ಮತ್ತು ಪಂಡಿತರಿಗೆ ಹಿಮಾಲಯದ ರಹಸ್ಯಗಳನ್ನು ಪತ್ತೆಹಚ್ಚಲು ಪ್ರವೇಶ ದ್ವಾರವಾಗಿತ್ತು.
ಜೋಹಾರ್ ಕಣಿವೆಯ ಮೂಲ ನಿವಾಸಿಗಳನ್ನು ಶೌಕಾ ಎಂದು ಕರೆಯಲಾಗುತ್ತದೆ. ಹಿಂದೆ ಇವರು ವರ್ಷಕ್ಕೆ ಎರಡು ಬಾರಿ ವಲಸೆ ಹೋಗುತ್ತಿದ್ದರು. ಚಳಿಗಾಲದಲ್ಲಿ ಕಣಿವೆಯ ಕೆಳಭಾಗದ ಗ್ರಾಮಗಳಿಗೆ (ಮುನ್ಸಿಯಾರಿ ಬಳಿ) ಮತ್ತು ಬೇಸಿಗೆಯಲ್ಲಿ ವ್ಯಾಪಾರಕ್ಕಾಗಿ ಮಿಲಂನಂತಹ ಎತ್ತರದ ಗ್ರಾಮಗಳಿಗೆ ಹೋಗುತ್ತಿದ್ದರು.
ಶೌಕಾ ಮಹಿಳೆಯರು ಉಣ್ಣೆಯ ನೇಯ್ಗೆಯಲ್ಲಿ ಪ್ರಸಿದ್ಧರು. ಅವರು ಉಣ್ಣೆಯ ಕಂಬಳಿಗಳು ಮತ್ತು ಸುಂದರವಾದ ಕಾರ್ಪೆಟ್‌ಗಳು ಇಂದಿಗೂ ಜಗತ್ಪ್ರಸಿದ್ಧ. ಇವರ ಆಹಾರದಲ್ಲಿ ಧಾನ್ಯದ ಹಿಟ್ಟು ಮತ್ತು ಟಿಬೆಟ್ ಪ್ರಭಾವದ ಉಪ್ಪು ಮಿಶ್ರಿತ ಚಹಾ ಪ್ರಮುಖವಾದವು.
ಇನ್ನು ಧಾರ್ಮಿಕವಾಗಿ ಈ ಕಣಿವೆಯು ಹಿಂದೂ ಪುರಾಣ ಮತ್ತು ಸ್ಥಳೀಯ ನಂಬಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಕಣಿವೆಯ ಜನರು ನಂದಾ ದೇವಿಯನ್ನು ತಮ್ಮ ಕುಲದೇವತೆಯಾಗಿ ಆರಾಧಿಸುತ್ತಾರೆ. ನಂದಾ ದೇವಿ ರಾಜ ಜಾತ್ ಯಾತ್ರೆಯ ಸಂದರ್ಭದಲ್ಲಿ ಈ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲ್ಪಡುತ್ತದೆ. ನಂದಾ ಕೋಟ್ ಮತ್ತು ನಂದಾ ಘುಂಟಿಯಂತಹ ಶಿಖರಗಳನ್ನು ದೈವಿಕ ಶಕ್ತಿಗಳ ನೆಲೆ ಎಂದು ನಂಬಲಾಗುತ್ತದೆ.
ಒಮ್ಮೆ ಸಮೃದ್ಧವಾಗಿದ್ದ ಮಿಲಂ ಮತ್ತು ಬುರ್ಫು ಎಂಬ ಗ್ರಾಮಗಳು ಇಂದು ವರ್ಷದ ಬಹುಪಾಲು ಸಮಯ ಖಾಲಿಯಾಗಿರುತ್ತವೆ. ಚಾರಣದ ಸಮಯದಲ್ಲಿ ಮಾತ್ರ ಇಲ್ಲಿ ಜನಸಂಚಾರ ಕಾಣಬಹುದು.
ಈ ಕಣಿವೆಯಲ್ಲಿನ ಪ್ರವಾಸಿಗಳ ಆಕರ್ಷಣೀಯ ಸ್ಥಳಗಳು:
– ಮಿಲಂ ಗ್ಲೇಸಿಯರ್
– ನಂದಾದೇವಿ ಪೂರ್ವ ಶಿಖರ
– ಕೆಲವು ವಿಭಿನ್ನ ಗ್ರಾಮಗಳು
ಮಿಲಂ ಗ್ಲೇಸಿಯರ್: ಇದು ಕಣಿವೆಯ ಅತ್ಯಂತ ಪ್ರಸಿದ್ಧ ಹಿಮನದಿ. ಚಾರಣಿಗರ ನೆಚ್ಚಿನ ತಾಣವಾಗಿದೆ.
ನಂದಾ ದೇವಿ ಪೂರ್ವ ಶಿಖರ: ಇಲ್ಲಿನ ಹಿಮಾಲಯದ ಭವ್ಯವಾದ ನಂದಾ ದೇವಿ, ಹಾರ್ದಿಯೋಲ್ ಮತ್ತು ತ್ರಿಶೂಲಿ ಶಿಖರಗಳನ್ನು ನೋಡಬಹುದು.
ಕೆಲವು ವಿಭಿನ್ನ ಗ್ರಾಮಗಳು: ಕಣಿವೆಯಲ್ಲಿ ಮಾರ್ಟೋಲಿ ಮತ್ತು ಮಿಲಂ ಅತಿ ಪ್ರಸಿದ್ಧ ಗ್ರಾಮಗಳು. ಇವುಗಳನ್ನು ಈಗ ‘ಭೂತ ಗ್ರಾಮಗಳು’ ಎಂದು ಕರೆಯಲಾಗುತ್ತದೆ, ಏಕೆಂದರೆ ಇಲ್ಲಿನ ಜನರು ಚಳಿಗಾಲದಲ್ಲಿ ಕೆಳಭಾಗಕ್ಕೆ ವಲಸೆ ಹೋಗುತ್ತಾರೆ ಮತ್ತು ವ್ಯಾಪಾರ ನಿಂತ ಮೇಲೆ ಜನಸಂಖ್ಯೆ ಕಡಿಮೆಯಾಗಿದೆ. ಚಾರಣದ ಸಮಯದಲ್ಲಿ ಮಾತ್ರ ಇಲ್ಲಿ ಹೆಚ್ಚಿನ ಜನರು ಕಾಣಲು ಸಿಗುತ್ತಾರೆ.
ಉತ್ತರಾಖಂಡದ ಜೋಹಾರ್ ಕಣಿವೆಯು ತಂಪಾದ ವಾತಾವರಣದೊಂದಿಗೆ ಹೂಬಿಡುವ ಹುಲ್ಲುಗಾವಲುಗಳು ಮತ್ತು ಪ್ರಸಿದ್ಧ ಹಿಮಾಲಯನ್ ಶಿಖರಗಳ ನೋಟದೊಂದಿಗೆ ನಿಮ್ಮ ಪ್ರವಾಸವನ್ನು ನೆಮ್ಮದಿಯ ಬೇಸಿಗೆಯನ್ನಾಗಿ ಬದಲಾಯಿಸುತ್ತದೆ
ಜೋಹಾರ್ ಕಣಿವೆಗೆ ಬೇಸಿಗೆಗೆ ಸೂಕ್ತ ಯಾಕೆ?
ಜೋಹಾರ್ ಕಣಿವೆ ಬೇಸಿಗೆಯಲ್ಲಿ ಸ್ವರ್ಗದಂತೆ ಭಾಸವಾಗುತ್ತದೆ, ಮೇ ನಿಂದ ಅಕ್ಟೋಬರ್ ವರೆಗೆ ಹಿಮ ಕರಗುವ ಸಮಯದಲ್ಲಿ ಸ್ಪಷ್ಟವಾದ ಹಾದಿಗಳು ಮತ್ತು ರೋಮಾಂಚನವಾದ ಹುಲ್ಲುಗಾವಲುಗಳನ್ನು ನಿಸರ್ಗದ ಪರಿಚಯ ಮಾಡಿಕೊಡುತ್ತವೆ.. ಮೇ ನಿಂದ ಜೂನ್ ವರೆಗೆ, ಕಣಿವೆಯು ದೃಶ್ಯಗಳು ಅತ್ಯುತ್ತಮವಾಗಿರುತ್ತದೆ, ಹಿಮಾಲಯದ ಕಾಡು ಹೂವುಗಳು ಅರಳುತ್ತವೆ, ರೋಡೋಡೆಂಡ್ರಾನ್ ಕಾಡುಗಳು ಬಣ್ಣದಲ್ಲಿ ಎದ್ದುಕಾಣುತ್ತಿರುತ್ತವೆ.
ಬೇಸಿಗೆಯಲ್ಲಿ ಭಾರತವು ಬಿಸಿಲಿನಿಂದ ಸುಡುತ್ತಿದ್ದರೂ ಕೂಡ ಜೋಹಾರ್ ಕಣಿವೆ ತಂಪಾಗಿರುತ್ತದೆ, ಹಗಲಿನ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುತ್ತದೆ. ಗಾಳಿಯು ಶುದ್ಧವಾಗಿದೆ, ನಗರ ಜೀವನಕ್ಕೆ ಹೋಲಿಸಿದರೆ ಚಂದವಾಗಿದೆ.
ಮನಾಲಿ ಅಥವಾ ನೈನಿತಾಲ್‌ಗಿಂತ ಭಿನ್ನವಾಗಿರುವ ಜೋಹಾರ್ ಕಣಿವೆಯು ಬೇಸಿಗೆಯಲ್ಲಿ ನೆಮ್ಮದಿ ನೀಡುತ್ತದೆ.

